Cyber crime  
ರಾಜ್ಯ

ಪ್ರಾಧ್ಯಾಪಕನಿಗೆ ₹1.19 ಕೋಟಿ ಸೈಬರ್ ಧೋಖಾ

ನಕಲಿ ಷೇರು ಮಾರುಕಟ್ಟೆ ಆ್ಯಪ್‌ಗಳ ಮೂಲಕ ವಂಚನೆ, ವಾಟ್ಸ್‌ಪ್ ಗ್ರೂಪ್‌ಗಳಲ್ಲಿ ಹೂಡಿಕೆ ಪಾಠ

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಭಾರಿ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾದ 65 ವರ್ಷದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ ₹ 1.19 ಕೋಟಿ ಕಳೆದುಕೊಂಡಿದ್ದಾರೆ.

ವಾಟ್ಸ್‌ಪ್ ಗ್ರೂಪ್‌ಗಳ ಮೂಲಕ ಷೇರು ಹೂಡಿಕೆ ಬಗ್ಗೆ ಮಾಹಿತಿ ನೀಡಿ, ನಕಲಿ ಟ್ರೇಡಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಸಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಕರು ಮೋಸದ ಬೆಲೆಗೆ ಬಿಳಿಸಿಕೊಂಡಿದ್ದರುವ ಬಗ್ಗೆ ನಗರದ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿರಾನಗರ ನಿವಾಸಿ ವಂಚನೆಗೊಳಗಾದ ಪ್ರಾಧ್ಯಾಪಕರು. ಆ.1ರಂದು ಸಾಮಾಜಿಕ ಜಾಲತಾಣದಲ್ಲಿ ಷೇರು ಮಾರುಕಟ್ಟೆ ಹೂಡಿಕೆಗೆ ಸಂಬಂಧಿಸಿದ ಜಾಹೀರಾತು ಗಮನಿಸಿದ್ದರು. ಅದರ ಲಿಂಕ್ ಕ್ಲಿಕ್ ಮಾಡಿದಾಗ ವೈಯಕ್ತಿಕ ವಿವರ ಭರ್ತಿ ಮಾಡುವ ಅರ್ಜಿ ತೆರೆದಿದೆ. ಮಾಹಿತಿ ಸಲ್ಲಿಸಿದ ಬಳಿಕ ಅವರ ವಾಟ್ಸ್‌ಪ್‌ಗೆ ’ಉಕಿಐ್ಕಖಿಖ ಇಘೆಘೆಉಇ ಆ310’ ಮತ್ತು ‘ಅಗಿಐಖ ಎ್ಕಏ ಊಣ್ಕಖಿ ’ ಎಂಬ ಎರಡು ಗ್ರೂಪ್‌ಗಳಿಂದ ಸಂದೇಶಗಳು ಬರಲಾರಂಭಿಸಿವೆ.

ಲಾಭದ ವಹಿವಾಟಿನ ಸ್ಕ್ರೀನ್‌ಶಾಟ್‌ಗೆ ಮರಳು:

ಈ ಗ್ರೂಪ್‌ಗಳಲ್ಲಿ ಷೇರು ಮಾರುಕಟ್ಟೆಯ ವಹಿವಾಟಿನ ಬಗ್ಗೆ ನಿರಂತರ ಮಾಹಿತಿ ನೀಡಲಾಗುತ್ತಿತ್ತು. ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಗ್ರೂಪ್‌ನ ಅಡ್ಮಿನ್ ಭರವಸೆ ನೀಡುತ್ತಿದ್ದರು. ಅಲ್ಲದೆ, ಗ್ರೂಪ್‌ನಲ್ಲಿದ್ದ ಕೆಲವರು ತಾವು ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಲಾಭ ಗಳಿಸಿರುವುದಾಗಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವ ನಕಲಿ ದಾಖಲೆಗಳನ್ನೂ ಪ್ರದರ್ಶಿಸಿರುವುದನ್ನು ನಂಬಿದ್ದ ಪ್ರಾಧ್ಯಾಪಕ.

ಮೂರು ನಕಲಿ ಆ್ಯಪ್‌ನಿಂದ ವಂಚನೆ:

ಸೈಬರ್ ವಂಚಕರ ಮಾತು ನಂಬಿದ ಪ್ರಾಧ್ಯಾಪಕನಿಗೆಆನ್‌ಲೈನ್ ಮೂಲಕ ಷೇರು ವಹಿವಾಟಿನ ತರಬೇತಿ ನೀಡುವುದಾಗಿ ಹೇಳಿ ಮೂರು ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಸಿದ್ದರು. ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ವೈಯಕ್ತಿಕ ಮಾಹಿತಿ ನೀಡಿದ್ದರು.

ನಂತರ ವಂಚಕರು ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು, ಷೇರು ಖರೀದಿ ಹೆಸರಿನಲ್ಲಿ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಯಾವ ಷೇರುಗಳನ್ನು ಖರೀದಿಸಬೇಕು, ಯಾವಾಗ ಮಾರಾಟ ಮಾಡಬೇಕು ಎಂಬುದನ್ನೂ ಅವರೇ ತಿಳಿಸುತ್ತಿದ್ದರು. ಷೇರು ಮಾರುಕಟ್ಟೆ ಆರಂಭವಾದ ಮರುದಿನವೇ ಷೇರುಗಳನ್ನು ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿದ್ದರು.

ಅ.1ರಂದು ಮೊದಲಿಗೆ 2 ಲಕ್ಷವನ್ನು ಆರ್‌ಟಿಜಿಎಸ್ ಮೂಲಕ ವಂಚಕರು ನೀಡಿದ್ದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಈ ಹಣ ನಕಲಿ ಟ್ರೇಡಿಂಗ್ ಆ್ಯಪ್‌ನಲ್ಲಿ ಹೂಡಿಕೆಯ ಮೊತ್ತ ಹಾಗೂ ಲಾಭದ ರೂಪದಲ್ಲಿ ಕಾಣಿಸಿಕೊಂಡಿದೆ. ಆ್ಯಪ್ ನಿಜ ಎಂದು ನಂಬಿದ್ದ ಪ್ರಾಧ್ಯಾಪಕರು ಹಂತ ಹಂತವಾಗಿ ಹಣ ಹೂಡಿಕೆ ಮುಂದುವರಿಸಿದ್ದಾರೆ.

ಅ.1ರಿಂದ 31ರವರೆಗೆ ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 1,19,12,000 ಹಣವನ್ನು ವಂಚಕರು ಸೂಚಿಸಿದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಕೆಲ ತಿಂಗಳ ಬಳಿಕ ಹಣ ವಾಪಸ್ ಪಡೆಯಲು ಯತ್ನಿಸಿದ್ದಾರೆ. ಆದರೆ ಹಣ ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ಬದಲಿಗೆ ತೆರಿಗೆ, ಸಂಸ್ಕರಣಾ ಶುಲ್ಕ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಮತ್ತಷ್ಟು ಹಣ ಪಾವತಿಸುವಂತೆ ವಂಚಕರು ಒತ್ತಾಯಿಸಿದ್ದಾರೆ. ಹೆಚ್ಚುವರಿ ಹಣ ಪಾವತಿಸಿದರೆ ಹೂಡಿಕೆಯ ಮೊತ್ತವನ್ನೆಲ್ಲ ನೀಡುವುದಾಗಿ ಹೇಳಿದ್ದಾರೆ. ಆಗ ಅವರಿಗೆ ತಾವು ವಂಚನೆಗೊಳಗಾಗಿರುವುದು ಅರಿವಾಗಿದೆ. ತಕ್ಷಣ ಸೈಬರ್ ಪೋರ್ಟ್‌ಲ್ ಮೂಲಕ ನ.4ರಂದು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.