ದೇವರಾಜ ಅರಸು ಪ್ರಶಸ್ತಿಗೆ ಪ್ರೊ.ಪಿ.ವಿ.ನಂಜರಾಜ ಅರಸು ಆಯ್ಕೆ: ಸಚಿವ ಶಿವರಾಜ್.ಎಸ್.ತಂಗಡಗಿ! Devaraj Urs Award
- ದೇವರಾಜು ಅರಸು ಪ್ರಶಸ್ತಿಗೆ ಪ್ರೊ ಪಿ ವಿ ನಂಜರಾಜ ಅರಸು ಆಯ್ಕೆ
- ಐದು ಲಕ್ಷ ರೂ ನಗದು ಹಾಗೂ ಫಲಕ ಒಳಗೊಂಡ ಪ್ರತಿಷ್ಠಿತ ಪ್ರಶಸ್ತಿ
- ಡಾ ಸಿ ಎಸ್ ದ್ವಾರಕಾನಾಥ್ ಅಧ್ಯಕ್ಷತೆಯ ಸಮಿತಿಯಿಂದ ಆಯ್ಕೆ ಪ್ರಕ್ರಿಯೆ
- ಆಗಸ್ಟ್ 20 ರಂದು ವಿಧಾನಸೌಧದಲ್ಲಿ ನಡೆಯಲಿದೆ ಪ್ರಶಸ್ತಿ ಪ್ರದಾನ ಸಮಾರಂಭ
- ಮೈಸೂರು ವಿವಿ ಪ್ರಾಧ್ಯಾಪಕರಾಗಿ ಇತಿಹಾಸ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ
ಬೆಂಗಳೂರು: 2026–27ನೇ ಸಾಲಿನ ‘ಡಿ.ದೇವರಾಜು ಅರಸು ಪ್ರಶಸ್ತಿ’ಗೆ ( Devaraj Urs Award )ಪ್ರೊ.ಪಿ.ವಿ.ನಂಜರಾಜ ಅರಸು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಸಾಮಾಜಿಕ ನ್ಯಾಯದ ಪರವಾಗಿ ಪ್ರೊ.ಪಿ.ವಿ.ನಂಜರಾಜ ಅರಸು ಅವರು ನಡೆಸಿದ ಹೋರಾಟ, ದೇವರಾಜು ಅರಸು ಅವರ ತತ್ವ–ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅವರ ಶ್ರಮ ಮತ್ತು ಪ್ರಾಧ್ಯಾಪಕರಾಗಿ ನೀಡಿದ ಕೊಡುಗೆಯಿಂದಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಡಾ.ಸಿ.ಎಸ್. ದ್ವಾರಕಾನಾಥ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಪ್ರೊ.ನಂಜರಾಜ ಅವರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ. ವಿಧಾನಸೌಧದಲ್ಲಿ ಇದೇ ಆ.20ರಂದು ಬೆಳಗ್ಗೆ 11ಗಂಟೆಗೆ ನಡೆಯುವ ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಇದಕ್ಕೂ ಮುನ್ನ ವಿಧಾನಸೌಧದ ಆವರಣದಲ್ಲಿರುವ ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದರು.
ಹಿನ್ನೆಲೆ
ನಂಜರಾಜ ಅರಸ ಅವರು ಜುಲೈ 01, 1936ರಂದು ಜನಿಸಿದ್ದು, 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ.ಪದವಿ, 1959ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. ಹಿಂದಿ ಪದವಿ ಪಡೆದಿದ್ದಾರೆ. 1973ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದು, ಇಲ್ಲಿಯೇ 39 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಇತಿಹಾಸ ಮತ್ತು ಸಂಸ್ಕೃತಿ ಕುರಿತು ಆಳವಾದ ಅಧ್ಯಯನ ನಡೆಸಿರುವ ನಂಜರಾಜ ಅರಸು ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್: ಒಂದು ದರ್ಶನ, ಮರೆಯಲಾಗದ ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು: ನೂರಿನ್ನೂರು ವರ್ಷಗಳ ಹಿಂದೆ, ಅಲಮೇಲಮ್ಮನ ಶಾಪ: ಒಂದು ಪರೀಕ್ಷೆ, ನಾನು ಕನ್ನಂಬಾಡಿ ಕಟ್ಟೆ: ಹೀಗೊಂದು ಆತ್ಮಕಥೆ ಹೀಗೆ ಇತಿಹಾಸಕ್ಕೆ ಸಂಬಂಧಿಸಿದ ಹಾಗೂ ಮೈಸೂರು ರಾಜಮನೆತನ, ಟಿಪ್ಪು ಸುಲ್ತಾನ್, ಸಾಮಾಜಿಕ - ರಾಜಕೀಯ ಇತಿಹಾಸದ ಕುರಿತು ವಿಶ್ಲೇಷಣಾತ್ಮಕ ಕೃತಿ ರಚಿಸಿದ್ದಾರೆ.
ದೇವರಾಜ ಅರಸು ಅವರ ಚಿಂತನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ಇತಿಹಾಸ ಅಧ್ಯಯನ, ಸಾಹಿತ್ಯ ಕ್ಷೇತ್ರ, ಚಲನಚಿತ್ರ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ.