ಎಚ್.ಡಿ.ಕೋಟೆ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳು ಹಾಗೂ ತಾಲೂಕು ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ದಿವಂಗತ ಪ್ರೊ. ಕೆ.ಪಿ. ಬಸವೇಗೌಡರವರ ನುಡಿನಮನ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಮಠಾಧ್ಯಕ್ಷ ಸೋಮೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು.
ಎಚ್.ಡಿ. ಕೋಟೆ: ಶಿಕ್ಷಣ, ಸಮಾಜಸೇವೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅಪಾರ ಕೊಡುಗೆ ನೀಡಿದ ಪ್ರೊ. ಕೆ.ಪಿ. ಬಸವೇಗೌಡ ಅವರ ಸೇವೆ ಇಂದಿನ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಮಠಾಧ್ಯಕ್ಷ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶುಕ್ರವಾರ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳು ಹಾಗೂ ತಾಲೂಕು ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ದಿ.ಪ್ರೊ. ಕೆ.ಪಿ. ಬಸವೇಗೌಡ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ವಿಶ್ರಾಂತಿ ಜೀವನ ನಡೆಸದೆ ತಮ್ಮ ಉಳಿದ ಜೀವಿತಾವಧಿಯನ್ನು ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟ ಅಪರೂಪದ ವ್ಯಕ್ತಿತ್ವ ಬಸವೇಗೌಡ ಅವರದ್ದಾಗಿತ್ತು. ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯುವಂತೆ ಶ್ರಮಿಸಿದ ಅವರ ಕಾರ್ಯ ಚಿರಸ್ಮರಣೀಯವಾಗಿದೆ ಎಂದು ಹೇಳಿದರು.
ಸಮಾಜದ ಒಳಿತಿಗಾಗಿ ಬದುಕನ್ನು ಮುಡಿಪಾಗಿಟ್ಟಿದ್ದ ಕಾರಣವೇ ಅವರು ದೀರ್ಘಾಯುಷ್ಯವನ್ನು ಅನುಭವಿಸಿದರು. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಆದಿಚುಂಚನಗಿರಿ ಸಂಸ್ಥಾನವು ಪ್ರತಿಷ್ಠಿತ ‘ಚುಂಚಶ್ರೀ ಪ್ರಶಸ್ತಿ’ ನೀಡಿ ಗೌರವಿಸಿತು. ಪ್ರಶಸ್ತಿಯೊಂದಿಗೆ ದೊರೆತ 15 ಲಕ್ಷ ರೂ. ಮೊತ್ತವನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸದೇ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ದತ್ತಿ ನಿಧಿಯಾಗಿ ಮೀಸಲಿಟ್ಟಿರುವುದು ಅವರ ಉದಾತ್ತ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇಂತಹ ಆದರ್ಶ ಗುಣಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಮೈಮುಲ್ ನಿರ್ದೇಶಕ ಈರೇಗೌಡ ಮಾತನಾಡಿ, ಕೇರಳಂ ಗಡಿ ಭಾಗದಲ್ಲಿರುವ ಎಚ್.ಡಿ. ಕೋಟೆ ತಾಲೂಕಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯ ಅಗತ್ಯವನ್ನು ಮನಗಂಡಿದ್ದ ಪ್ರೊ. ಬಸವೇಗೌಡರು, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಸಣ್ಣಮಟ್ಟದಲ್ಲಿ ಆರಂಭವಾದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಅನೇಕರು ವಿವಿಧ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಅವರ ದೂರದೃಷ್ಟಿಯ ಫಲವಾಗಿದೆ ಎಂದು ಹೇಳಿದರು.
ಪ್ರೊ.ಬಸವೇಗೌಡ ಅವರು ಶಿಕ್ಷಣದ ಜತೆಗೆ ಮೌಲ್ಯಾಧಾರಿತ ಬದುಕು, ಸಾಮಾಜಿಕ ಬದ್ಧತೆ ಮತ್ತು ಮಾನವೀಯತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಮತ್ತು ಸೇವಾ ಮನೋಭಾವ ಬೆಳೆಸುವ ಮೂಲಕ ಉತ್ತಮ ನಾಗರಿಕರನ್ನು ರೂಪಿಸುವ ಕೆಲಸ ಮಾಡಿದ್ದಾರೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೂ ದಾರಿದೀಪವಾಗಲಿವೆ ಎಂದು ಹಲವು ಗಣ್ಯರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಾಂಶುಪಾಲ ಜೆ.ಎನ್. ವೆಂಕಟೇಶ್, ಸೆನೆಟ್ ಸದಸ್ಯ ಕೃಷ್ಣೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಹರೀಶ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ರಾಜೇಂದ್ರ, ನರಸಿಂಹೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಜಗದೀಶ್, ನಿಂಗೇಗೌಡ, ಬಿ.ಪಿ. ಭಾಸ್ಕರ್, ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮೀನರಸಿಂಹೇಗೌಡ, ಭೈರೇಗೌಡ, ಜವರೇಗೌಡ, ಒಕ್ಕಲಿಗ ಯುವ ಸಮಿತಿ ಅಧ್ಯಕ್ಷ ಡಿ.ಸಿ. ಸ್ವಾಮಿ, ಎ.ಟಿ. ನಾಗರಾಜು, ಶಿವಣ್ಣೇಗೌಡ, ಅಂಗಡಿ ಸತೀಶ್, ಸೋಮೇಶ್, ರಾಜೇಂದ್ರ, ಲೋಕೇಶ್, ಮಹದೇವ, ಮಹದೇವು, ರವಿಕುಮಾರ್, ಕಲ್ಗೆರೆಗೌಡ, ಮಂಜು, ಮಂಚಿಂಗೇಗೌಡ, ರಾಜೇಗೌಡ, ವೆಂಕಟೇಗೌಡ, ಮಂಜುಕೋಟೆ, ಸತ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪ್ರಮೋದ್, ಲಯನ್ ಬೆಳಗನಹಳ್ಳಿ ಬಸವರಾಜು, ಭೈರಪ್ಪ, ಮುಖ್ಯೋಪಾಧ್ಯಾಯಿನಿ ನಂದಿನಿ, ಮಹದೇವಪ್ರಸಾದ್, ಸಂತೋಷ್, ರಾಜೇಶ್, ಮಲ್ಲೇಶ್, ಶ್ರೀನಿವಾಸ್, ರಾಮಚಂದ್ರ, ನಾಗರಾಜು, ಕಲ್ಲೇಶ್ ಗೌಡ ತಂಬಡಿ, ಸೂರ್ಯಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಇದ್ದರು.