ಮುಧೋಳದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಉಚಿತ ನೇತ್ರ-ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ. ವೆಂಕಟೇಶ್ ಗುಡೆಪ್ಪನವರ ಅವರನ್ನು ರಾಜ್ಯ ಸಮಿತಿ ಸದಸ್ಯ ಈಶ್ವರ ಶೆಟ್ಟರ ಸನ್ಮಾನಿಸಿದರು. ಬಿ. ರತ್ನಾಕರ ಶೆಟ್ಟಿ, ಗೋಪಾಲ ಖಾಸೆ, ವಿಠ್ಠಲ ಮಾದರ ಇತರರಿದ್ದರು. 
ರಾಜ್ಯ

ಜನಪರ ಪತ್ರಿಕೋದ್ಯಮಕ್ಕೆ ಆತ್ಮಾವಲೋಕನ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸಮಿತಿ ಸದಸ್ಯ ಈಶ್ವರ ಶೆಟ್ಟರ ಹೇಳಿಕೆ
  • ಪತ್ರಿಕಾ ದಿನಾಚರಣೆ ಆರೋಗ್ಯ ತಪಾಸಣಾ ಶಿಬಿರ
ಮುಧೋಳ: ಪತ್ರಿಕೋದ್ಯಮದ ಮೌಲ್ಯ, ವಿಶ್ವಾಸಾರ್ಹತೆ ಮತ್ತು ಜನಪರತೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಪತ್ರಕರ್ತರೂ ತಮ್ಮ ವತ್ತಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಈಶ್ವರ ಶೆಟ್ಟರ ಹೇಳಿದರು.
ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಉಚಿತ ನೇತ್ರ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲ ಸಮಸ್ಯೆಗಳನ್ನು ನಾನೊಬ್ಬನೇ ಬದಲಾಯಿಸಬಲ್ಲೆ ಎಂಬ ಭಾವನೆಯಿಂದ ಪತ್ರಕರ್ತರು ಹೊರಬರಬೇಕು. ಜನರ ಸಮಸ್ಯೆಗಳಿಗೆ ಧ್ವನಿಯಾಗುವ, ಜನಪರ ವರದಿಗಾರಿಕೆಗೆ ಆದ್ಯತೆ ನೀಡುವ ಮೂಲಕ ಪತ್ರಿಕೋದ್ಯಮದ ಮೌಲ್ಯವನ್ನು ಉಳಿಸಬೇಕಿದೆ. ದಶ್ಯ ಮಾಧ್ಯಮಗಳ ವೇಗದ ನಡುವೆಯೂ ಮುದ್ರಣ ಮಾಧ್ಯಮದ ಮೇಲಿನ ಜನರ ವಿಶ್ವಾಸ ಇನ್ನೂ ಅಚಲವಾಗಿದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಗೋಪಾಲ ಖಾಸೆ ಮಾತನಾಡಿ, ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತಂದು ಆಡಳಿತದ ಗಮನ ಸೆಳೆಯುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಉಪ ನೋಂದಣಿ ಅಧಿಕಾರಿ ವಿಠ್ಠಲ ಮಾದರ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕಾರಂಗ ಯಾವುದೇ ನಿರ್ಬಂಧವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂದರು.
ಸಂಘದ ಅಧ್ಯಕ್ಷ ಬಿ. ರತ್ನಾಕರ ಶೆಟ್ಟಿ ಮಾತನಾಡಿ, ಸತ್ಯವನ್ನು ಸಮಾಜದ ಮುಂದೆ ತರುವ ಪತ್ರಕರ್ತರು ವತ್ತಿಯ ಸವಾಲುಗಳನ್ನು ಎದುರಿಸಲು ಸಂಘಟಿತರಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಇತ್ತೀಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಹಾಗೂ ಕೆಯುಡಬ್ಲೂೃಜೆ ರಾಜ್ಯ ಪ್ರಶಸ್ತಿ ಪಡೆದ ಪತ್ರಕರ್ತ-ಸಾಹಿತಿ ಡಾ. ವೆಂಕಟೇಶ್ ಗುಡೆಪ್ಪನವರ ಅವರನ್ನು ಸನ್ಮಾನಿಸಲಾಯಿತು. ಪತ್ರಿಕಾ ವಿತರಕರಾದ ಆನಂದ ವಾಲಿಕಾರ ಮತ್ತು ಇಸ್ಮಾಯಿಲ್ ಮುಜಾವರ ಅವರನ್ನೂ ಗೌರವಿಸಲಾಯಿತು.
ಡಾ. ಎಂ.ಎಂ. ಜೋಶಿ ನೇತ್ರ ಸಂಶೋಧನಾ ಸಂಸ್ಥೆ ವತಿಯಿಂದ ರವಿ ದಾಸರ ನೇತತ್ವದಲ್ಲಿ ಕಣ್ಣಿನ ಉಚಿತ ತಪಾಸಣೆ ನಡೆಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ದೀಪಾ ಪಾಟೀಲ, ದೊಡ್ಡಮ್ಮ ಮಾದರ, ಮಂಜುಳಾ ಮಾದರ, ಕಮಲಾ ಬಂಟನೂರ ಹಾಗೂ ತಾಯಮ್ಮ ಅಮತಿಗೌಡರ ಅವರು ರಕ್ತದೊತ್ತಡ, ರಕ್ತ ಪರೀಕ್ಷೆ ಸೇರಿ ವಿವಿಧ ಆರೋಗ್ಯ ತಪಾಸಣೆಗಳನ್ನು ನೆರವೇರಿಸಿದರು.
ವಿಶ್ವನಾಥ ಮುನವಳ್ಳಿ, ಅಶೋಕ ಕುಲಕರ್ಣಿ, ಬಿ.ಎಚ್. ಬೀಳಗಿ, ಗಣೇಶ ಮೇತ್ರಿ, ಸಲೀಂ ಕೊಪ್ಪದ, ಹಸನ ಡೊಂಗ್ರಿ, ಮಹಾಂತೇಶ ಕರೆಹೊನ್ನ, ಜಗದೀಶ ಜೀರಗಾಳ, ಶ್ರೀನಿವಾಸ ಬಬಲಾದಿ, ಗೋವಿಂದಪ್ಪ ತಳವಾರ, ಬಂದೇನವಾಜ ರಾಮದುರ್ಗ, ಸಿದ್ದು ಹೂಗಾರ, ಈರಣ್ಣ ಸಾಲಗುಂದಿ ಸೇರಿ ಪತ್ರಕರ್ತರು ಉಪಸ್ಥಿತರಿದ್ದರು.