Tiptur ತಿಪಟೂರಿನಲ್ಲಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಿರುವುದು. 
ರಾಜ್ಯ

ತಿಪಟೂರು ಬಂದ್​ಗೆ ಹಿಂದೂಪರ ಸಂಘಟನೆ ಕರೆ Tiptur

ತಿಪಟೂರು: ನಗರದಲ್ಲಿ ಕಳೆದ ಎರಡು&-ಮೂರು ದಿನಗಳಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ.
ನಗರದಲ್ಲಿ ಸದ್ಯ ಎರಡು ಪ್ರತ್ಯೇಕ ಘಟನೆಗಳು ಉದ್ವಿಗ್ನತೆಗೆ ಕಾರಣವಾಗಿವೆ. ಮೊದಲನೆಯದಾಗಿ, ರಂಜಾನ್​ ಹಬ್ಬದಂದು ಗೋಸಾಗಾಟ ತಡೆಯಲು ಹೋದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗೆಯೇ, ಮಾವಿನತೋಪು ಬಡಾವಣೆಯ ಅಂಜುಮಾನ್​ ಪಾಠಶಾಲೆಗೆ ಮಂಜೂರಾದ ನಿವೇಶನದಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಘಟನೆಗಳನ್ನು ಖಂಡಿಸಿ ಹಾಗೂ ಪೊಲೀಸ್​ ಇಲಾಖೆಯ ಕಾರ್ಯವೈಖರಿ ವಿರೋಧಿಸಿ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಮಾ.24ರಂದು "ತಿಪಟೂರು ಬಂದ್​'ಗೆ ಕರೆ ನೀಡಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಗರದಾದ್ಯಂತ ಹೆಚ್ಚುವರಿ ಪೊಲೀಸ್​ ತುಕಡಿಗಳನ್ನು ನಿಯೋಜಿಸಲಾಗಿದೆ.
ಬಂದ್​ಗೆ ನಮ್ಮ ಸಹಮತ
ರಂಜಾನ್​ ಹಬ್ಬದ ದಿನ ನಡೆದ ಘಟನೆಗೂ, ನಮಗೂ ಸಂಬಂಧವಿಲ್ಲ. ತಿಪಟೂರು ಬಂದ್​ಗೆ ನಮ್ಮ ಸಹಮತವಿದೆ. ನಗರದಲ್ಲಿ ಹಿಂದೂ&-ಮುಸ್ಲಿಮರು ಅನ್ಯೋನ್ಯವಾಗಿದ್ದಾರೆ. ಯುಗಾದಿ ಹಬ್ಬದಂದು ಹಿಂದೂಗಳು ಮತ್ತು ನಾವು ಸೌಹಾರ್ದವಾಗಿ ಹಬ್ಬ ಆಚರಿಸಿದ್ದೇವೆ. ಆದರೆ ಮೊನ್ನೆ ರಂಜಾನ್​ ದಿನ ನಡೆದಿರುವ ಕಹಿ ಘಟನೆಗೂ ನಮಗೂ ಸಂಬಂಧವಿಲ್ಲ. ಅಂದು ನಡೆದಿರುವುದು ಹಿಂದೂಪರ ಸಂಘಟನೆ ಯುವಕರು ಮತ್ತು ವ್ಯಾಪಾರಿಗಳ ಮಧ್ಯೆ ಆದ ಗಲಾಟೆ. ವ್ಯಾಪಾರದ ನಿಮಿತ್ತ ಸಾಗಿಸಲಾಗುತ್ತಿದ್ದ ಗೋವನ್ನು ತಡೆಯಲು ಹೋದ ಯುವಕರೊಂದಿಗೆ ಮಾತಿನ ಚಕಮಕಿ ನಡೆದು ಐದಾರು ಮಂದಿ ಹಲ್ಲೆ ಮಾಡಿರಬಹುದು. ಆದರೆ ಪೊಲೀಸ್​ ದೂರಿನಲ್ಲಿ ಬಿಂಬಿಸಿರುವಂತೆ 50ರಿಂದ 60 ಮಂದಿ ಹಲ್ಲೆ ನಡೆಸಿಲ್ಲ. ಇದಕ್ಕೆ ನಮ್ಮಬಳಿ ಪುರಾವೆ ಇದೆ. ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ತರಲು ಸಣ್ಣ ಘಟನೆಯನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ತಾಲೂಕಿನ ಗಾಂಧಿನಗರದ ಮದೀನಾ ಮಸೀದಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದ್ದಾರೆ.