Priyank Kharge hits back at Tejasvi Surya
- ಟ್ರಾಫಿಕ್ನಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗಲಿಲ್ಲ ಎಂದ ತೇಜಸ್ವಿ ಸೂರ್ಯ
- ನೀಟ್ ಪ್ರಶ್ನೆಪತ್ರಿಕೆ ಲೀಕ್ ಆಗಿ 22 ಲಕ್ಷ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾದ ಬಗ್ಗೆ ಮಾತನಾಡಿ ಎಂದ ಪ್ರಿಯಾಂಕ್
- ವಿದ್ಯಾರ್ಥಿಗಳು ಟ್ರಾಫಿಕ್ನಿಂದ ತಡವಾಗಿ ತಲುಪಿಲ್ಲ ಎಂದು ಸ್ಪಷ್ಟನೆ ಕೊಟ್ಟ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ 'ರ‍್ಯಾಲಿ' ನಡೆಸಲು ನೀಟ್ ಮರು ಪರೀಕ್ಷೆಯ ದಿನವನ್ನೇ ಆಯ್ಕೆ ಮಾಡಿಕೊಂಡ ಕಾಂಗ್ರೆಸ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದರು. ಸದ್ಯ ಅವರ ಎಕ್ಸ್ ಟ್ವೀಟ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ತೇಜಸ್ವಿ ಸೂರ್ಯ ಏನಂದ್ರು?
ಅರಮನೆ ಮೈದಾನದಲ್ಲಿ ರ‍್ಯಾಲಿ ನಡೆಸಲು ಸರ್ಕಾರ ಬೇರೆ ದಿನವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಿರುವ ದಿನವನ್ನೇ ಆರಿಸಿಕೊಂಡಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾದ ಕಾರಣ ತಡವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಿದರು, ಇನ್ನು ಕೆಲವರು ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ಳುವ ಸ್ಥಿತಿ ಎದುರಾಯಿತು. ಮಾನವೀಯತೆ ಮೇರೆಗೆ ಅಧಿಕಾರಿಗಳು ಪರೀಕ್ಷೆ ಬರೆಯಲು ಅವಕಾಶ ಕೊಟ್ಟರು ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು, ದೆಹಲಿಯಲ್ಲಿ ವಿದ್ಯಾರ್ಥಿಗಳ ಪರವಾಗಿ ಮೊಸಳೆ ಕಣ್ಣೀರು ಸುರಿಸುವ ರಾಹುಲ್ ಗಾಂಧಿ ಮತ್ತು ಅವರ ಪಕ್ಷಕ್ಕೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಪರೀಕ್ಷೆಯ ದಿನ ಈ ರ‍್ಯಾಲಿಯನ್ನು ತಪ್ಪಿಸಬಹುದಿತ್ತು. ವಿದ್ಯಾರ್ಥಿಗಳಿಗೆ ಸಂವೇದನೆ ಬೇಕೇ ಹೊರತು ರಾಜಕೀಯ ನಾಟಕಗಳಲ್ಲ. ದೆಹಲಿಯಲ್ಲಿ ಘೋಷಣೆ ಕೂಗುವ ಕಾಳಜಿ, ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಪರಿಣಮಿಸಿದೆ ಎಂದು ಅವರು ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ಟಾಂಗ್
'ಸರಣಿ ತಪ್ಪು ಮಾಹಿತಿ ನೀಡುವ ಸಂಸದ' ಎಂದು ಪರೋಕ್ಷವಾಗಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಕರೆದಿದ್ದಾರೆ. ಬೆಂಗಳೂರಿನ ಆರ್ಸಿ ಕಾಲೇಜಿನಲ್ಲಿ ನೀಟ್ ಪರೀಕ್ಷೆ ಬರೆಯಲು 720 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿ ಅಲಾಟ್ ಮಾಡಲಾಗಿತ್ತು. ಅದರಲ್ಲಿ 142 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಮೂವರು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಮೂವರಲ್ಲಿ ಒಬ್ಬ ವಿದ್ಯಾರ್ಥಿ ಮಾಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕಿತ್ತು. ಬಸ್ ಸಮಯಕ್ಕೆ ಸರಿಯಾಗಿ ಸಿಗದ ಕಾರಣ, ಪರೀಕ್ಷೆಗೆ ಹಾಜರಾಗುವುದು ತಡವಾಯ್ತು. ಮತ್ತೊಬ್ಬ ಅಭ್ಯರ್ಥಿಯು 3.05.2026 ರಂದು ನಡೆದ ಪರೀಕ್ಷೆಗೆ ಸೇರಿದ ಹಳೆಯ ಹಾಲ್ ಟಿಕೆಟ್‌ನೊಂದಿಗೆ ಬಂದಿದ್ದರಿಂದ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿಲ್ಲ. ಆರ್‌ಟಿ ನಗರ ಕಡೆಯಿಂದ ಪ್ರಯಾಣಿಸುತ್ತಿದ್ದ ಒಬ್ಬ ಅಭ್ಯರ್ಥಿ ಮಾತ್ರ ಪರೀಕ್ಷೆಗೆ ಹಾಜರಾಗಲಿಲ್ಲ, ಈ ಬಗ್ಗೆ ನಾವು ನಿಖರ ಕಾರಣ ಪತ್ತೆ ಹಚ್ಚುತ್ತಿದ್ದೇವೆ.
ಇದರೊಂದಿಗೆ, ಬೆಂಗಳೂರು ಸಂಚಾರಿ ಪೊಲೀಸರು ರ‍್ಯಾಲಿ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಮತ್ತು ಸಂಚಾರ ಮಾರ್ಗಸೂಚಿಗಳನ್ನುಸಾಕಷ್ಟು ಮುಂಚಿತವಾಗಿಯೇ ಹೊರಡಿಸಿದ್ದರು ಎಂದರು.
ನೀಟ್ ಪತ್ರಿಕೆ ಲೀಕ್ ಬಗ್ಗೆ ಏನಂತೀರಿ?
ವಿವಿಧ ಕಾರಣಗಳಿಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಸಂಸದರು, ತಮ್ಮದೇ ಆದ ಅಸಮರ್ಥ ಸರ್ಕಾರವು ನೀಟ್ ದುರುಪಯೋಗ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅವ್ಯವಸ್ಥೆಯಿಂದಾಗಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದ್ದಾಗ ಈ ಕನಿಕರ ಎಲ್ಲಿತ್ತು. 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ಮಭನವಾಗಿದ್ದರು.
ಬಿಜೆಪಿ ಸಂಸದರ ಸ್ವಂತ ತರ್ಕದ ಪ್ರಕಾರ, ಇಂದು ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗೆ ಕಾಂಗ್ರೆಸ್ ರ್ಯಾಲಿಯೇ ಕಾರಣವಾಗಿದ್ದರೆ, ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಸಂಕಷ್ಟ ಮತ್ತು ಸಾವುಗಳಿಗೆ ಮೋದಿ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅವರನ್ನು ಕಚೇರಿಯಿಂದ ಹೊರಹಾಕಬೇಕು ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ, (ಏಜೆನ್ಸೀಸ್).