ರಾಜ್ಯ

ಪ್ರಿಯಾಂಕ್​ ಕೇವಲ ಪ್ರಚಾರ ಮಂತ್ರಿ

ಪ್ರಮುಖ ಮುಖ್ಯಾಂಶಗಳು

  • ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪ
  • ಕಕಕ್ಕೆ ಶುದ್ಧ ಕುಡಿವ ನೀರು ಮರಿಚಿಕೆ
 ಯಾದಗಿರಿ: ಕಲ್ಯಾಣ ಕರ್ನಾಟಕಕ್ಕೆ ಶುದ್ಧ ಕುಡಿವ ನೀರು ಕೊಡಲಾಗದ ಪ್ರಚಾರ ಮಂತ್ರಿ ಪ್ರಿಯಾಂಕ್​ ಖರ್ಗೆ ಅವರೇ ನಿಮ್ಮ ಅಂಕಿ ಅಂಶಗಳ ವೈಫಲ್ಯಕ್ಕೆ ಉತ್ತರವಿದೆಯಾ ಎಂದು ವಿಧಾನ ಪರಿಷತ್​ ಪ್ರತಿಪಕ್ಷದ ನಾಯಕ, ಯಾದಗಿರಿ ಉಸ್ತುವಾರಿ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಲ್ಯಾಣ ಕರ್ನಾಟಕದ ಜನರು ಕುಡಿವ ನೀರಿಗಾಗಿ ಪರದಾಡುತ್ತಿರುವುದು ಆತಂಕಕಾರಿಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ ಅವರು ಅಭಿವೃದ್ಧಿ ಕುರಿತು ದೊಡ್ಡ, ದೊಡ್ಡ ಭಾಷಣ ಮಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಕ್ಟ್​ ಚೆಕ್​ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರದೇ ಇಲಾಖೆ ಅಂಕಿ ಅಂಶಗಳು ಆಡಳಿತದ ಭೀಕರ ವೈಫಲ್ಯವನ್ನು ಬಹಿರಂಗಪಡಿಸುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು.
ಕಲ್ಯಾಣ ಕರ್ನಾಟಕದಲ್ಲಿ 3,965 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಗ್ರಾಮ ಪಂಚಾಯಿತಿ ಅಧೀನದಲ್ಲಿ 2,98 7 ಘಟಕಗಳಿದ್ದು, ಅವುಗಳಲ್ಲಿ 1,708 ಕಾರ್ಯನಿರ್ವಹಿಸುತ್ತಿವೆ. ಶೇ.43 ಘಟಕಗಳು ಸ್ಥಗಿತಗೊಂಡು ದೂಳು ಹಿಡಿಯುತ್ತಿವೆ. ಮೂರು ವರ್ಷಗಳಲ್ಲಿ ಘಟಕಗಳ ನಿರ್ವಹಣೆ ಮತ್ತು ದುರಸ್ತಿ ಹೆಸರಿನಲ್ಲಿ 17 ಕೋಟಿ ರೂ.ಗೂ ಹೆಚ್ಚು ಹಣ ಖರ್ಚಾಗಿದೆ ಎಂದು ಸದನದಲ್ಲಿ ನೀಡಿದ ಅಂಕಿ ಅಂಶ ಉಲ್ಲೇಖಿಸಿದ ಛಲವಾದಿ, ಇದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿನ 510 ಘಟಕಗಳಲ್ಲಿ ಕೇವಲ 132 ಕಾರ್ಯನಿರ್ವಹಿಸುತ್ತಿದ್ದು, ಶೇ 75 ಘಟಕಗಳು ಸ್ಥಗಿತವಾಗಿವೆ. ಸ್ವಂತ ಜಿಲ್ಲೆಯಲ್ಲೆ ವೈಫಲ್ಯವಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಬಗ್ಗೆ ದೊಡ್ಡ ಭಾಷಣ ಮಾಡುವುದು ರಾಜಕೀಯ ದುರಹಂಕಾರದ ಪರಮಾವಧಿ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಸಚಿವರ ಸಂಪೂರ್ಣ ಗಮನ ಆರ್​ಎಸ್​ಎಸ್​, ಬಿಜೆಪಿ ನಾಯಕರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಕ್ಟ್​ ಚೆಕ್​ ಮಾಡುವುದರಲ್ಲೆ ಮುಳುಗಿದೆ. ಅವರು ಗ್ರಾಮೀಣಾಭಿವೃದ್ಧಿ ಸಚಿವರಿಗಿಂತ ಕಾಂಗ್ರೆಸ್​ ಸರ್ಕಾರದ ಪ್ರಚಾರ ಮಂತ್ರಿಯಾಗಿ ಹೆಚ್ಚು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು  ವ್ಯಂಗ್ಯವಾಡಿದ್ದಾರೆ. ಬೇರೆಯವರ ತಟ್ಟೆಯಲ್ಲಿ ಏನಿದೆ ಎಂದು ಇಣುಕಿ ನೋಡುವ ಮುನ್ನ, ತಮ್ಮ ಇಲಾಖೆಯ ತಟ್ಟೆಯಲ್ಲಿರುವ ಕೊಳೆಯನ್ನು ಮೊದಲು ಸ್ವಚ್ಛಗೊಳಿಸಬೇಕು. ನಿಮ್ಮ ಇಲಾಖೆ ವೈಫಲ್ಯದ ಬಗ್ಗೆ ಯಾರು ಫ್ಯಾಕ್ಟ್​  ಚೆಕ್​ ಮಾಡಬೇಕು? ನಿಮ್ಮದೇ ಜಿಲ್ಲೆಯ ಜನರಿಗೆ ಕುಡಿಯುವ ನೀರು ಕೊಡಲಾಗದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ನಾರಾಯಣಸ್ವಾಮಿ ಜರಿದಿದ್ದಾರೆ.
ಆರ್​ಎಸ್​ಎಸ್​ ಮತ್ತು ವಿರೋಧ ಪದವರನ್ನು ಟೀಕಿಸಲು ಬಳಸುವ ನಿಮ್ಮ ಸಮಯದ ಅರ್ಧದಷ್ಟಾದರೂ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬಳಸಿದ್ದರೆ ಇಂದು ಕಲ್ಯಾಣ ಕರ್ನಾಟಕದ ಜನ ಹನಿ ನೀರಿಗಾಗಿ ಬೀದಿಗಿಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.