Private schools have a role to play in the development of the educational system.
ತಿಪಟೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿರದಿದ್ದರೆ ದೇಶದ ಶೈಕ್ಷಣಿಕ ವ್ಯವಸ್ಥೆ ಇಷ್ಟು ಮುಂದುವರಿಯುತ್ತಿರಲಿಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಕಲ್ಪತರು ವಿದ್ಯಾಸಂಸ್ಥೆ 64 ವರ್ಷ ಪೂರೈಸಿದ ಹಿನ್ನೆಲೆ ಹಮ್ಮಿಕೊಂಡಿದ್ದ ಕಲ್ಪತರು ಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಹಾಗೂ ಡೊನೇಷನ್ ಬಗ್ಗೆ ಪ್ರಶ್ನಿಸುವವರು ಒಮ್ಮೆ ಲೌಖಿಕವಾಗಿ ಯೋಚಿಸಿದರೆ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದರ ಹಿಂದಿರುವ ಪರಿಶ್ರಮ ಅರಿವಾಗುತ್ತದೆ. ಇಂದು ಎಲ್ಲ ರೀತಿಯ ಮೂಲಸೌಕರ್ಯಗಳ ನಡುವೆಯೂ ಶಿಕ್ಷಣ ವ್ಯವಸ್ಥೆಯ ಕೊರತೆ ಎದ್ದು ಕಾಣುತ್ತಿದೆ. ನೀಟ್ ಪರೀಕ್ಷಾ ಅಕ್ರಮ ತಡೆಯಲು ಎಷ್ಟೇ ಪ್ರಯತ್ನಿಸಿದರೂ ಸಾದ್ಯವಾಗುತ್ತಿಲ್ಲ ಎಂದರು.
ಒಂದು ಕಟ್ಟಡ ಪೂರ್ಣಗೊಂಡ ನಂತರ ಎಲ್ಲವೂ ಚೆನ್ನಾಗಿ ಕಾಣುತ್ತದೆ. ಆದರೆ ಕಟ್ಟಡ ನಿರ್ಮಿಸಿದ ರೂವಾರಿಗಳ ಪರಿಶ್ರಮ ಯಾರಿಗೂ ಅರ್ಥವಾಗಲ್ಲ. ಕಲ್ಪತರು ಶಿಕ್ಷಣ ಸಂಸ್ಥೆಯನ್ನು ಮಹಾಲಿಂಗಪ್ಪ ಅವರು ಕಷ್ಟಪಟ್ಟು ಕಟ್ಟಿದ್ದಾರೆ. ಆಲದಮರದ ನೆರಳಿನ ಶಕ್ತಿ ನೆರಳಿನಲ್ಲಿದ್ದವರಿಗೆ ಗೊತ್ತಾಗುತ್ತದೆ. ಆದರೆ ಈ ಆಲದಮರವನ್ನು ಬೆಳೆಸಿದವರನ್ನು ಸ್ಮರಿಸಿ ಗೌರವಿಸುವುದು ಕೆಲವರಿಗಷ್ಟೇ ತಿಳಿದಿದೆ ಎಂದರು.
ಯಾವುದೇ ಒಂದು ಪಟ್ಟಣ ಗುರುತಿಸಿಕೊಳ್ಳುವುದು ಅಲ್ಲಿರುವ ಶಿಕ್ಷಣ ವ್ಯವಸ್ಥೆಯ ಆಧಾರದಲ್ಲಿ. ದಿ.ಅಡವಪ್ಪ ಅವರು ಶಿಕ್ಷಣದ ಉದ್ದೇಶಕ್ಕೆಂದೇ 180 ಎಕರೆ ಭೂಮಿಯನ್ನು ತಾಲೂಕಿನ ಕಿಬ್ಬನಹಳ್ಳಿ ಬಳಿ ಬಿಟ್ಟು ಹೋಗಿದ್ದಾರೆ. ಆದರೆ ಕಲ್ಪತರು ಶಿಕ್ಷಣ ಸಂಸ್ಥೆ ಟ್ರಸ್ಟ್ ಮತ್ತು ಪದಾಧಿಕಾರಿಗಳ ನಡುವಿನ ಗೊಂದಲದಿಂದ ಭೂಮಿ ಅನ್ಯರ ಪಾಲಾಗುತ್ತಿದೆ. ಈಗಲಾದರೂ ಕಲ್ಪತರು ವಿದ್ಯಾಸಂಸ್ಥೆ ಮನಸ್ಸು ಮಾಡಿ ಈ ಭೂಮಿಯನ್ನು ಅಭಿವೃದ್ಧಿ ಪಡಸಿದರೆ ಈ ಸಂಸ್ಥೆ ಮತ್ತಷ್ಟು ವಿಶಾಲವಾಗಿ ಬೆಳೆಯುತ್ತದೆ ಎಂದರು.
ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಸ್ವಾಮಿವಿವೇಕಾನಂದರು ಹೇಳಿದಂತೆ ರಾಷ್ಟ್ರದ ಅನೇಕ ಸಮಸ್ಯೆಗಳಿಗೆ ಮೂಲ ಪರಿಹಾರವೇ ಶಿಕ್ಷಣ. ಅವರ ಮಾತನ್ನು ಕಲ್ಪತರು ಶಿಕ್ಷಣ ಸಂಸ್ಥೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗಿದೆ. ಡಾ.ಸಿದ್ದಲಿಂಗಯ್ಯ ಹೊಲತಾಳು ಬರೆದಿರುವ ಕಲ್ಪತರು ಕಥನದ ಶೀರ್ಷಿಕೆ ತಿಪಟೂರಿನ ಅಸ್ಮಿತೆಯನ್ನು ಬಿಂಬಿಸಿದೆ. ನಾವು ಯಾರ ಬಗ್ಗೆ ಬರೆಯುತ್ತೇವೆಯೋ ಅವರ ಅಂತರಂಗ ಬಲ್ಲವರಾಗಿ ಬರೆದಾಗ ಮಾತ್ರ ಲೇಖನಕ್ಕೆ ಮೆರುಗು ಬರುತ್ತದೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೋ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಜಗತ್ತಿನಲ್ಲಿ ಮಹಾತ್ಮಗಾಂಧಿ ಅವರ ಅತ್ಮಕಥನಕ್ಕೆ ಮಾತ್ರ ಮಾನ್ಯತೆ ಸಿಕ್ಕಿದೆ. ತನ್ನನ್ನು ತಾನು ಹೊಗಳಿಕೊಂಡು ಕೃತಿ ರಚಿಸಿದರೆ ಅದು ಆತ್ಮರತಿ ಆಗುತ್ತದೆ. ರಾಜ್ಯದ ಶಿಕ್ಷಣ ನೀತಿ ಅಧೋಗತಿಗೆ ಇಳಿದಿದೆ. ಕನ್ನಡ ಭಾಷೆ ಕಳೆದುಹೋಗುತ್ತಿದ್ದು, ರಾಜ್ಯ ಅನ್ಯಬಾಷಿಕರ ದಾಸ್ಯಕ್ಕೊಳಗಾಗಿದೆ ಎಂದು ವಿಷಾಧಿಸಿದರು.
ಬಾಗೇಪಲ್ಲಿ ನಟರಾಜು, ಜಿ.ಪಿ.ದೀಪಕ್, ಕಾರ್ಯದರ್ಶಿ ಎಂ.ಆರ್.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಜಿ.ಎಸ್.ಉಮಾಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಇದ್ದರು.