ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಎನ್‌ಒಸಿ ಪೀಕಲಾಟ
- ಖಾಸಗಿ ಕಾಲೇಜುಗಳು, ಮೆಕಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್‌ನಂತಹ ಕೋರ್ ವಿಭಾಗಗಳನ್ನು ಬದಿಗಿಟ್ಟು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳ ಇನ್‌ಟೇಕ್ ಹೆಚ್ಚಿಸಿಕೊಳ್ಳುತ್ತಿವೆ
- ಬೇಡಿಕೆ ಇದೆ ಎಂದು ಹೇಳಿ ಎಷ್ಟೇ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಲಕ್ಷಾಂತರ ರೂ. ಶುಲ್ಕವನ್ನು ಪಡೆದರೂ ಪ್ಲೇಸ್‌ಮೆಂಟ್ ಕೇವಲ ಶೇ.17ರಷ್ಟು ಮಾತ್ರ ಎಂದು ಸಮೀಕ್ಷೆಗಳಲ್ಲಿ ಬಹಿರಂಗ
- ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳ ಹೆಚ್ಚಳಕ್ಕೆ ಕಡಿವಾಣ ಹಾಕುವುದಕ್ಕಾಗಿ ರಚಿಸಲಾಗಿದ್ದ ಡಾ.ಎಸ್. ಸಡಗೋಪನ್ ನೇತೃತ್ವದ ತಜ್ಞರ ಸಮಿತಿಯ ವರದಿ ಜಾರಿಗೆ ಸರ್ಕಾರ ಆದೇಶ ಹೊರಡಿಸಿದೆ.
- ಡಾ.ಎಸ್. ಸಡಗೋಪನ್ ನೇತೃತ್ವದ ತಜ್ಞರ ಸಮಿತಿಯ ವರದಿ ಪ್ರಕಾರ, ಈ ವರ್ಷ ಶೇ.17ರಷ್ಟು ಕಂಪ್ಯೂಟರ್ ಸೈನ್ಸ್ ಸೀಟುಗಳನ್ನು ಕಡಿತಗೊಳಿವುದಾಗಿ ಆದೇಶ
ಬೆಂಗಳೂರು: ಟ್ರೆಂಡ್‌ಗೆ ತಕ್ಕಂತೆ ಬೇಡಿಕೆ ಇರುವ ಕಂಪ್ಯೂಟರ್ ಸೈನ್ಸ್ ಸೀಟುಗಳನ್ನು ಮನಬಂದಂತೆ ಹೆಚ್ಚಳ ಮಾಡಿಕೊಂಡಿರುವ ರಾಜ್ಯದ ಬಹುತೇಕ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು) ಮಾನ್ಯತೆ ದೊರೆತಿದ್ದರೂ, ಮುಂದಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯ ಸರ್ಕಾರದ ಎನ್‌ಇಸಿ (ನಿರಪೇಕ್ಷಣಾ ಪತ್ರ) ದೊರೆಯದಿರುವುದರಿಂದ ಪೀಕಲಾಟಕ್ಕೆ ಸಿಲುಕಿವೆ.
ಸಾಮಾನ್ಯವಾಗಿ ರಾಜ್ಯ ಸರ್ಕಾರಕ್ಕಿಂತ ಎಐಸಿಟಿಇ ಮಾನ್ಯತೆ ಪಡೆಯುವುದೇ ಕಷ್ಟದ ಕೆಲಸ. ಆದರೆ, ಈ ಬಾರಿ ಎಐಸಿಟಿಇ ಪಡೆದಿದ್ದರೂ, ರಾಜ್ಯ ಸರ್ಕಾರದ ಮಾನ್ಯತೆಗೆ ಉನ್ನತ ಶಿಕ್ಷಣ ಇಲಾಖೆಯು ಕೊಕ್ಕೆ ಹಾಕಲಿದೆಯೇ ಎಂಬ ಆತಂಕದಲ್ಲಿ ಖಾಸಗಿ ಕಾಲೇಜುಗಳಿವೆ.
ಪೀಕಲಾಟಕ್ಕೆ ಕಾರಣವೇನು?
ಇತ್ತೀಚಿನ ಐದು ವರ್ಷಗಳಲ್ಲಿ ಉಳಿದೆಲ್ಲ ಕೋರ್ಸ್‌ಗಳಿಗಿಂತ ಇಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್‌ಗೆ ಹೆಚ್ಚಿನ ಆದ್ಯತೆ ಮತ್ತು ಬೇಡಿಕೆ ಇದೆ. ಇದನ್ನೇ ಮಾನದಂಡ ಮಾಡಿಕೊಂಡಿರುವ ಖಾಸಗಿ ಕಾಲೇಜುಗಳು, ಮೆಕಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್‌ನಂತಹ ಕೋರ್ ವಿಭಾಗಗಳನ್ನು ಬದಿಗಿಟ್ಟು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳ ಇನ್‌ಟೇಕ್ ಹೆಚ್ಚಿಸಿಕೊಳ್ಳುತ್ತಿವೆ.
ಬೇಡಿಕೆ ಇದೆ ಎಂದು ಹೇಳಿ ಎಷ್ಟೇ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಲಕ್ಷಾಂತರ ರೂ. ಶುಲ್ಕವನ್ನು ಪಾಲಕರಿಂದ ಪಡೆದರೂ ಕೊನೆಗೆ ಇಂಜಿನಿಯರಿಂಗ್‌ನಲ್ಲಿ ಪ್ಲೇಸ್‌ಮೆಂಟ್ ಆಗುತ್ತಿರುವುದು ಕೇವಲ ಶೇ.17ರಷ್ಟು ಮಾತ್ರ ಎಂದು ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ.
ಸಡಗೋಪನ್ ವರದಿ ಕಂಟಕ
ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳ ಹೆಚ್ಚಳಕ್ಕೆ ಕಡಿವಾಣ ಹಾಕುವುದಕ್ಕಾಗಿ ರಚಿಸಲಾಗಿದ್ದ ಡಾ.ಎಸ್. ಸಡಗೋಪನ್ ನೇತೃತ್ವದ ತಜ್ಞರ ಸಮಿತಿಯ ವರದಿ ಜಾರಿಗೆ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಈ ವರ್ಷ ಶೇ.17ರಷ್ಟು ಕಂಪ್ಯೂಟರ್ ಸೈನ್ಸ್ ಸೀಟುಗಳನ್ನು ಕಡಿತಗೊಳಿವುದಾಗಿ ಆದೇಶವಾಗಿದೆ.
ಆದರೆ, ಈ ವರದಿ ನೀಡುವುದಕ್ಕೂ ಮೊದಲೇ ಎಐಸಿಟಿಇ ಮಾನ್ಯತೆ ಪಡೆದಿದ್ದೇವೆ. ಈಗ ವರದಿ ಅನುಷ್ಠಾನ ಮಾಡಿದರೆ ಹೇಗೆ ಎಂಬುದು ಖಾಸಗಿಯವರ ಪ್ರಶ್ನೆಯಾಗಿದೆ. ಆದರೆ, ಶೈಕ್ಷಣಿಕ ವರ್ಷವೇ ಆರಂಭವಾಗದೆ ಹೇಗೆ ನೀವು ಹಿಂದಿನ ವರ್ಷವೇ ಸೀಟುಗಳನ್ಜು ಪಡೆಯಲು ಅನುಮತಿ ಪಡೆದಿದ್ದೀರಿ ಎಂಬ ವಾಗ್ವಾದ ಸರ್ಕಾರ ಮತ್ತು ಖಾಸಗಿಯವರ ನಡೆಯುತ್ತಿದೆ.
ಹೊಸ ಸಚಿವರತ್ತ ಖಾಸಗಿಯವರ ನೋಟ
ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡಬಾರದು. ವೈಜ್ಞಾನಿಕವಾಗಿ ಸೀಟುಗಳನ್ನು ಹೆಚ್ಚಳ ಮಾಡಬೇಕೆಂಬ ಉದ್ದೇಶದಿಂದ ಹಿಂದಿನ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಸಡಗೋಪನ್ ವರದಿ ಸ್ವೀಕರಿಸಿ ಅನುಷ್ಠಾನ ಮಾಡಿದ್ದರು. ಈ ವರದಿಯೇ ಖಾಸಗಿಯವರಿಗೆ ಮುಳ್ಳಾಗಿರುವುದರಿಂದ ನೂತನ ಉನ್ನತ ಶಿಕ್ಷಣ ಸಚಿವರತ್ತ ಖಾಸಗಿಯವರ ನೋಟವಾಗಿದೆ.
ಈ ಬಾರಿ ಸಡಗೋಪನ್ ವರದಿಯನ್ನು ಅನುಷ್ಠಾನ ಮಾಡಬೇಡಿ ಎಂಬುದು ಅವರ ಬೇಡಿಕೆ ಇಡಲು ಮುಂದಾಗಿದ್ದಾರೆ ಎಂದು ಖಾಸಗಿ ಕಾಲೇಜಿನ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ಆದರೆ, ನೂತನ ಉನ್ನತ ಶಿಕ್ಷಣ ಸಚಿವರು ಯಾವ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂಬುದನ್ನು ಕಾಯ್ದುನೋಡಬೇಕಿದೆ.
ಇಂಜಿನಿಯರಿಂಗ್ ಪದವೀಧರರಲ್ಲಿ ಶೇ17 ಮಂದಿಗೆ ಪಾತ್ರ ಪ್ಲೇಸ್‌ಮೆಂಟ್ ಆಗುತ್ತಿರುವ ಕಾರಣ. ಸೀಟುಗಳ ಹೆಚ್ಚಳಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವರದಿ ಜಾರಿಗೆ ಸರ್ಕಾರ ಆದೇಶಿಸಿದೆ.
ಎನ್‌ಒಸಿ ಇಲ್ಲದ ಕಾಲೇಜುಗಳ ಕೈಬಿಟ್ಟ ಸರ್ಕಾರ
ಹೊಸ ಕಾಲೇಜುಗಳನ್ನು ಪ್ರಾರಂಭಿಸಲು ಎಐಸಿಟಿಇಯಿಂದ ಅನುಮತಿ ಪತ್ರ ಪಡೆದಿದ್ದರೂ, ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯದ ಕಾಲೇಜುಗಳನ್ನು ಕರಡು ಸೀಟ್ ಮ್ಯಾಟ್ರಿಕ್ಸ್‌ನಿಂದ ಕೈಬಿಡಲಾಗಿದೆ.