- * ಸಚಿವ ಯು.ಟಿ.ಖಾದರ್ ಮಾಹಿತಿ
- * ಆಸ್ಪತ್ರೆಗೆ ಕರೆದೊಯ್ಯುವ ಮಿತಿ ಇಳಿಕೆ
ಬೆಂಗಳೂರು: ರಾಜ್ಯದಲ್ಲಿ 108 ಆರೋಗ್ಯ ಕವಚ ಯೋಜನೆಯಡಿ ಆಂಬುಲೆನ್ಸ್ ಸೇವೆ ಬಲಪಡಿಸಲು ಆದ್ಯತೆ ನೀಡಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು. ಆರೋಗ್ಯಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಮಾನದಂಡದ ಪ್ರಕಾರ ಆಂಬುಲೆನ್ಸ್ ರೋಗಿಯನ್ನು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯುವ ಸಮಯದ ಮಿತಿ (ಗೋಲ್ಡನ್ ಅವರ್) 20 ನಿಮಿಷವಿದೆ. ವಿವಿಧ ಕಾರಣಗಳಿಂದ ಈ ಸಮಯದೊಳಗೆ ಕರೆದೊಯ್ಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗುತ್ತಿದೆ ಎಂದರು.
ಈ ಬದಲಾವಣೆಯಿಂದ 10 ನಿಮಿಷಗಳ (ಪ್ಲಾಟಿನಂ ಅವರ್) ಮಿತಿಯನ್ನು ಗೊತ್ತುಪಡಿಸಲಾಗುತ್ತಿದೆ. ಆಂಬುಲೆನ್ಸ್ ರೋಗಿಯ ಬಳಿ ತಲುಪಿದ ಬಳಿಕ ತುರ್ತು ಚಿಕಿತ್ಸೆ ಲಭ್ಯವಾಗುತ್ತದೆ. ಇದಕ್ಕಾಗಿ ಆಂಬುಲೆನ್ಸ್‌ನಲ್ಲಿ ಶುಶ್ರೂಷಕರು ಹಾಗೂ ತಂತ್ರಜ್ಞರು ಇರುತ್ತಾರೆ ಎಂದು ವಿವರಿಸಿದರು.
ಮಾನದಂಡ ಅನುಸರಿಸಬೇಕು
ಜನೌಷಧ ಕೇಂದ್ರಗಳಲ್ಲಿ ಬ್ರ್ಯಾಂಡೆಂಡ್ ಔಷಧಗಳ ಮಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈ ಕೇಂದ್ರಗಳಲ್ಲಿ ಖಾಸಗಿ ಕಂಪನಿಯ ಔಷಧಗಳನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಇಲಾಖೆಯ ಅಥವಾ ನಿಗದಿತ ಮಾನದಂಡಗಳ ಪ್ರಕಾರವೇ ಕಂಪನಿಗಳು ಔಷಧ ಮಾರಾಟ ಮಾಡಬೇಕು. ಜನೌಷಧ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ಔಷಧಗಳು ದೊರೆಯುತ್ತವೆ ಎಂಬ ಕಾರಣಕ್ಕೆ, ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿರದ ಔಷಧಗಳನ್ನು ಮಾರಾಟ ಮಾಡಿ ಜನರನ್ನು ತಪ್ಪುದಾರಿಗೆಳೆಯುವ ಕೆಲಸ ಆಗಬಾರದು ಎಂದರು.
ವೈದ್ಯರ ನೇಮಕಾತಿಗೆ ಕ್ರಮ
ವೈದ್ಯರ ನೇಮಕಾತಿ ಕುರಿತು ಉತ್ತರಿಸಿದ ಸಚಿವರು, ಹಣಕಾಸು ಇಲಾಖೆ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದೇನೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು ವೈದ್ಯರು ಕೆಲಸಕ್ಕೆ ಸೇರುವವರೆಗೆ ಒಂದು ವರ್ಷ ಸಮಯ ಬೇಕಾಗಬಹುದು ಎಂದರು.