ಕಲಬುರಗಿ ಶರಣಬಸವ ವಿವಿ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದಲ್ಲಿ ಪ್ರೊ.ವಿ.ಡಿ.ಮೈತ್ರಿ, ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಡಾ.ಎಸ್.ಎಚ್.ಹೊನ್ನಳ್ಳಿ, ಡಾ.ಕಿರಣ ಮಾಕಾ, ಡಾ.ಸುಜಾತಾ ಮಲ್ಲಾಪುರ, ಡಾ.ಶಿವಕುಮಾರ ಜವಳಿಗಿ, ಟಿ.ವಿ.ಶಿವಾನಂದನ್ ಇತರರಿದ್ದರು.
- ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ ಹೇಳಿಕೆ
- ಶರಣಬಸವ ವಿಶ್ವವಿದ್ಯಾಲಯದಲ್ಲಿ ಇಂಡಕ್ಷನ್ ಕಾರ್ಯಕ್ರಮ
ಕಲಬುರಗಿ: ವಿಶ್ವವಿದ್ಯಾಲಯದ ಜೀವನವು ಕೇವಲ ಪಠ್ಯಪುಸ್ತಕಗಳ ಅಧ್ಯಯನಕ್ಕೆ ಸೀಮಿತವಾಗಿರದೆ, ಜ್ಞಾನ, ಕೌಶಲ, ಶಿಸ್ತು, ಜವಾಬ್ದಾರಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಹಂತ. ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ, ಅಧ್ಯಯನ ಮತ್ತು ಶಿಸ್ತುಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ 15 ದಿನಗಳ ಇಂಡಕ್ಷನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ನಿಯಮಗಳು ಮತ್ತು ಶೈಕ್ಷಣಿಕ ವಾತಾವರಣ ಗೌರವಿಸುವುದರ ಜತೆಗೆ ತರಗತಿಗಳಿಗೆ ನಿಯಮಿತವಾಗಿ ಹಾಜರಾಗಬೇಕು. ಪಠ್ಯಕ್ರಮ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು. ಆಂತರಿಕ ಮೌಲ್ಯಮಾಪನ, ಅಸೈನಮೆಂಟ್, ಪ್ರಾಯೋಗಿಕ ತರಬೇತಿ ಮತ್ತು ಸೆಮಿಸ್ಟರ್ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಮಾತನಾಡಿ, ಶರಣಬಸವ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಕೇವಲ ಒಂಬತ್ತು ವರ್ಷಗಳಾಗಿದ್ದರೂ, ಶೈಕ್ಷಣಿಕ ಪರಂಪರೆ ಮತ್ತು ಮೌಲ್ಯಗಳ ಹಿಂದೆ ಶತಮಾನಕ್ಕೂ ಮೀರಿದ ಶ್ರೀಮಂತ ಇತಿಹಾಸವಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಮೂಲ್ಯ ಸೇವೆಯೇ ಶರಣಬಸವ ವಿಶ್ವವಿದ್ಯಾಲಯದ ಭದ್ರ ಬುನಾದಿ ಎಂದು ಹೇಳಿದರು.
ವಿಶೇಷವಾಗಿ ಮಹಿಳಾ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಸ್ಥೆ ಆರಂಭದಿಂದಲೂ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. 1934ರಲ್ಲಿ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಆರಂಭಿಸುವ ಮೂಲಕ ಶರಣಬಸವೇಶ್ವರ ವಿದ್ಯಾವರ್ಧಕ ಸಂ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿಯ ಹೆಜ್ಜೆ ಇಟ್ಟಿದೆ. ಶಾಲಾ ಶಿಕ್ಷಣದಿಂದ ಆರಂಭಗೊಂಡ ಈ ಶೈಕ್ಷಣಿಕ ಚಳವಳಿ ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಶಿಕ್ಷಣ ಹಾಗೂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಸೇರಿ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಮೂಲಕ ಬೃಹತ್ ಶೈಕ್ಷಣಿಕ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ. ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಪೌಷ್ಟಿಕ ಆಹಾರ ದೊರೆಯುವಂತೆ ಕೇವಲ 5 ರೂ.ಗೆ ಊಟ ನೀಡುವ ವ್ಯವಸ್ಥೆ ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ.ಕಿರಣ ಮಾಕಾ, ಸಂಶೋಧನಾ ಡೀನ್ ಡಾ.ಸುಜಾತಾ ಮಲ್ಲಾಪುರ, ಡೀನ್ ಡಾ.ಶಿವಕುಮಾರ ಜವಳಗಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಇತರರಿದ್ದರು.
ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ. ಕುಡಿವ ನೀರಿನ ಕೊರತೆ, ಶೌಚಗೃಹಗಳ ಸ್ವಚ್ಛತೆ, ತರಗತಿ ಕೊಠಡಿಗಳ ಮೂಲ ಸೌಲಭ್ಯ ಸೇರಿ ಏನೇ ಇದ್ದರೂ ಮುಕ್ತವಾಗಿ ಹೇಳಿಕೊಳ್ಳಿ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗುವುದು.
— > ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಕುಲಸಚಿವೆ, ಶರಣಬಸವ ವಿವಿ