ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ಕೇಂದ್ರ ಕಚೇರಿಯಲ್ಲಿ ಫಲಾನುಭವಿಗಳಿಗೆ ಆಂತರಿಕ ವಿಮಾ ಯೋಜನೆ ಪರಿಹಾರ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್​, ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ, ಕಾರ್ಮಿಕ ಕಲ್ಯಾಣಾಧಿಕಾರಿ ಚಂದ್ರಕಾಂತ ಫುಲೇಕರ್​ ಇತರರಿದ್ದರು. 
ರಾಜ್ಯ

ನೌಕರರ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಿಕುಮಾರ ಹೇಳಿಕೆ
  • 2.30 ಕೋಟಿ ರೂ. ಆಂತರಿಕ ವಿಮೆ ಪರಿಹಾರ ವಿತರಣೆ
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅಕಾಲಿಕ ಮರಣ ಹೊಂದಿದ ನೌಕರರಿಗೆ ತಲಾ 10 ಲಕ್ಷ ರೂ.ನಂತೆ ಒಟ್ಟು 23 ಜನರಿಗೆ 2.30 ಕೋಟಿ ರೂ. ವಿಮೆ ಪರಿಹಾರ ವಿತರಿಸಲಾಗಿದೆ. ಹೀಗಾಗಿ ನೌಕರರ ಕಲ್ಯಾಣ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್​ ಹೇಳಿದರು.
ನಿಗಮದ ಕೇಂದ್ರ ಕಚೇರಿಯಲ್ಲಿ ಸೋಮವಾರ ಫಲಾನುಭವಿಗಳಿಗೆ ವಿಮೆ ಪರಿಹಾರ ವಿತರಿಸಿದ ನಂತರ ಮಾತನಾಡಿದ ಅವರು, ಆರಂಭದಲ್ಲಿ ವಿಮೆ ಪರಿಹಾರ 3 ಲಕ್ಷ ರೂ. ನಿಗದಿಯಾಗಿತ್ತು. ಹಂತ, ಹಂತವಾಗಿ ಏರಿಕೆ ಮಾಡಿ ಇದೀಗ 12.50 ಲಕ್ಷ ರೂ.ಗೆ ಬಂದಿದೆ. ನೌಕರರ ವೇತನದಲ್ಲಿ ಪ್ರತಿ ತಿಂಗಳು 200 ರೂ. ಜತೆಗೆ ಸಂಸ್ಥೆ 210 ರೂ. ವಂತಿಗೆ ಭರಿಸುತ್ತಿದೆ. ಫೆಬ್ರವರಿಯಿಂದ ಈ ವಂತಿಗೆ ಹಣ ನೌಕರರ ಪಾಲು 300 ರೂ, ಸಂಸ್ಥೆ 210 ರೂ. ಭರಿಸಲಿದೆ ಎಂದು ವಿವರಿಸಿದರು.
ನಿಗಮದ ವ್ಯಾಪ್ತಿಯಲ್ಲಿ ಬರುವ ಬೀದರ್​, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ವ್ಯಾಪ್ತಿಯಲ್ಲಿ ಮೃತರಾದ ನೌಕರರ ಕುಟುಂಬಕ್ಕೆ ವಿಮೆ ಪರಿಹಾರ ದೊರೆಯಲಿದೆ. ಸಂಸ್ಥೆಯಲ್ಲಿ ಒಟ್ಟು 19400 ಜನ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ತಿಂಗಳಿಗೆ ಸರಾಸರಿ 7&8 ಜನ ಮೃತರಾಗುತ್ತಿದ್ದಾರೆ. ನೌಕರರು ಸಾವನ್ನಪ್ಪಿದ ಒಂದು ತಿಂಗಳೊಳಗೆ ವಿಮೆ ಪರಿಹಾರ ಮೊತ್ತ ವಿತರಿಸಲಾಗುತ್ತಿದೆ ಎಂದು ಹೇಳಿದರು.
ನೌಕರರ ವೇತನ ಮಾಡುವ ಬ್ಯಾಂಕು ಪ್ರತಿ ನೌಕರರಿಗೆ 1 ಕೋಟಿ ರೂ. ಅಪಘಾತ ವಿಮೆ ಪರಿಹಾರ ನೀಡುತ್ತಿದ್ದು, ಸಾಮಾನ್ಯ ಸಾವಿಗೂ 5 ಲಕ್ಷ ರೂ.ವರೆಗೆ ಪರಿಹಾರ ನೀಡುತ್ತಿದೆ. ಸಂಸ್ಥೆಯ ಆಂತರಿಕ ವಿಮೆ ಪರಿಹಾರದ ಜತೆಗೆ ಬ್ಯಾಂಕು ನೀಡುವ ಹೆಚ್ಚುವರಿ ಪರಿಹಾರ ನೌಕರರ ಕುಟುಂಬಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ತಿಳಿಸಿದರು.
ನಿಗಮದ ಚಾಲಕರ ಮೇಲೆ ಆಗಾಗ ಹಲ್ಲೆ ನಡೆಯುತ್ತಿರುವುದು ಕಂಡುಬಂದಿದೆ. ಕೆಲವೆಡೆ ಹಲ್ಲೆ ನಡೆಸಿದವರ ಮೇಲೆ ಪ್ರಕರಣವನ್ನೂ ದಾಖಲಿಸಲಾಗಿದೆ. ಓವರ್​ ಟೇಕ್​ ಮಾಡಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಸಂಸ್ಥೆಯ ಬಸ್​ ಚಾಲಕರ ಮೇಲೆ ಹಲ್ಲೆ ನಡೆಸುವುದು ತರವಲ್ಲ. ಜನರಲ್ಲೂ ಜಾಗೃತಿ ಬರಬೇಕು. ಪ್ರಯಾಣಿಕರನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಜವಾಬ್ದಾರಿಯೊಂದಿಗೆ ಚಾಲಕರು ಕೆಲಸ ನಿರ್ವಹಿಸುತ್ತಾರೆ. ಹಲ್ಲೆಯಂತಹ ಟನೆಗಳು ನಡೆಯಬಾರದು. ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ, ಕಾರ್ಮಿಕ ಕಲ್ಯಾಣಾಧಿಕಾರಿ ಚಂದ್ರಕಾಂತ ಫುಲೇಕರ್​ ಇತರರಿದ್ದರು.
"

23 ಜನರಿಗೆ ಒಟ್ಟು 2.30 ಕೋಟಿ ರೂ. ವಿಮೆ ಪರಿಹಾರ ವಿತರಿಸಲಾಗಿದೆ. ಇತ್ತೀಚಿಗೆ ನಡೆದ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದಂತೆ ಮುಂದಿನ ದಿನಗಳಲ್ಲಿ ವಿಮೆ ಪರಿಹಾರ ತಲಾ 12.50 ಲಕ್ಷ ರೂ. ಹೆಚ್ಚಿಸಲಾಗುತ್ತಿದೆ. ರಾಜ್ಯದ ಉಳಿದ ನಿಗಮಗಳಿಗಿಂತಲೂ ವಿಮೆ ಪರಿಹಾರ ನಮ್ಮ ಸಂಸ್ಥೆಯಲ್ಲಿ ಹೆಚ್ಚು ನೀಡಲಾಗುತ್ತಿದೆ.

ಅರುಣಕುಮಾರ ಎಂ.ವೈ.ಪಾಟೀಲ್​,

ಅಧ್ಯಕ್ಷ, ಕೆಕೆಆರ್​ಟಿಸಿ, ಕಲಬುರಗಿ.