ಹೊಸಕೋಟೆ ಬಮುಲ್​ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ ಗೌಡ ಅವರು ಹಾಲು ಉತ್ಪಾದಕರಿಗೆ ಮೇವಿನ ಜೋಳದ ಬೀಜಗಳನ್ನು ವಿತರಿಸಿದರು. ಎಂವಿಜೆ ವೈದ್ಯಕಿಯ ಕಾಲೇಜಿನ ವೈದ್ಯಾಧಿಕಾರಿ ಡಾ.ಪ್ರಮೋದ್​, ಗ್ರಾಮಾಂತರ ಸಹಕಾರ ಒಕ್ಕೂಟದ ನಿರ್ದೇಶಕ ಮಾಕನಹಳ್ಳಿ ರಮೇಶ್​, ಹೊಸಕೋಟೆ ಡೇರಿ ವ್ಯವಸ್ಥಾಪಕ ಮಧುಸೂಧನ್​ ಇದ್ದರು.  
ರಾಜ್ಯ

ಹೈನುಗಾರರ ಆರೋಗ್ಯಕ್ಕೆ ಆದ್ಯತೆ / HOSAKOTE

ಹೊಸಕೋಟೆ : ಬಮುಲ್​ ಒಕ್ಕೂಟದ ಶಕ್ತಿಯಾಗಿರುವ ಹೈನುಗಾರರು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದ್ದು, ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ಗೌಡ ಹೇಳಿದರು.
ತಾಲೂಕಿನ ಚಿಕ್ಕಹುಲ್ಲೂರಿನಲ್ಲಿರುವ ಕಚೇರಿಯಲ್ಲಿ ರಾಜ್ಯ ಸಹಕಾರ ಮಂಡಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ, ಬೆಂಗಳೂರು ಸಹಕಾರ ಹಾಲು ಒಕ್ಕೂಟ, ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​, ಸಹಕಾರ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರಿಗೆ ವೈದ್ಯಕಿಯ ತಪಾಸಣೆ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು ಒಕ್ಕೂಟಕ್ಕೆ ಹಾಲು ಉತ್ಪಾದಕರೇ ಜೀವನಾಡಿ. ಹೈನುಗಾರರ ಆರೋಗ್ಯ, ಅಗತ್ಯ ಸೌಲಭ್ಯ, ವಿಮೆ ಯೋಜನೆಯಂಥ ಹತ್ತಾರು ಕಲ್ಯಾಣ ಕಾರ್ಯಕ್ರಮಗಳನ್ನು ಬಮುಲ್​ ನೀಡುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ಹಾಲು ಉತ್ಪಾದಕರಿಗೆ ಅನುಕೂಲವಾಗಿವೆ. ರೈತರು, ಹೈನುಗಾರರು ಶಿಬಿರಗಳ ಪ್ರಯೋಜನೆ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಸಹಕಾರ ಸಪ್ತಾಹ ಪ್ರಯುಕ್ತ ಗ್ರಾಮಾಂತರ ಸಹಕಾರ ಯೂನಿಯನ್​ನಿಂದ ಎಂವಿಜೆ ಆಸ್ಪತ್ರೆ ಸಹಯೋಗದೊಂದಿಗೆ ಹೊಸಕೋಟೆ ಶಿಬಿರ ಕಚೇರಿಯಲ್ಲಿ ತಾಲೂಕು ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಹೊಸಕೋಟೆ ಡೇರಿ ಸಿಬ್ಬಂದಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದರು.
ಪರಿಸರ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಹಾಲು ಉತ್ಪಾದಕರಿಗೆ ಮೇವಿನ ಜೋಳದ ಬೀಜ ವಿತರಿಸಲಾಯಿತು.
ಹೊಸಕೋಟೆ ಶಿಬಿರ ಕಚೇರಿಯ ಮುಖ್ಯಸ್ಥ ಜಿ.ವಿನಯ್​ ಕುಮಾರ್​, ಪಶು ವೈದ್ಯಕಿಯ ಮುಖ್ಯಸ್ಥ ಡಾ.ಸಂತೋಷ್​, ವಿಸ್ತರಣಾಧಿಕಾರಿಗಳಾದ ರಮೇಶ್​, ಆನಂದ್​, ಪವಿತ್ರಾ, ವಿದ್ಯಾಶ್ರೀ, ತಾಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ತಿಮ್ಮಸಂದ್ರ ವಿಜಯ್​ಕುಮಾರ್​, ಹೊಸಕೋಟೆ ತಾಲೂಕು ವ್ಯಾಪ್ತಿಯ ಹಾಲು ಉತ್ಪಾದಕ ಸಹಕಾರ ಸಂಘದ ಸಿಬ್ಬಂದಿ, ಕಾರ್ಯನಿರ್ವಾಹಕರು ಇದ್ದರು.