Prioritize the cleanliness of dairies 
ರಾಜ್ಯ

ಡೇರಿಗಳ ಸ್ವಚ್ಛತೆಗೆ ಆದ್ಯತೆ ನೀಡಿ

ಶಿರಾ: ಬಿಸಿಲಿನ ಬೇಗೆಯಲ್ಲೂ ಕೂಡ ಹಾಲು ಉತ್ಪಾದನೆಯಲ್ಲಿ ತುಮಕೂರು ಜಿಲ್ಲೆ ಹೆಚ್ಚು ಹಾಲು ಉತ್ಪಾದನೆ ಮಾಡಿದ ಕೀರ್ತಿ ಪಡೆದಿದೆ. ಪ್ರತಿದಿನ 82 ಸಾವಿರ ಲೀಟರ್​ ಹಾಲು ಉತ್ಪಾದನೆ ಮಾಡುವ ಮೂಲಕ ಶಿರಾದಲ್ಲಿ ಕ್ಷೀರ ಕ್ರಾಂತಿಯೇ ಆರಂಭವಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್​.ಆರ್​.ಗೌಡ ಹೇಳಿದರು.
ಶಿರಾ ನಗರದ ಕ್ಷೀರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕಿನ ಡೇರಿ ಕಾರ್ಯದರ್ಶಿ ಹಾಗೂ ಹಾಲು ಪರೀಕ್ಷಕರಿಗೆ ತಲಾ ಎರಡು ಜತೆ ಬಟ್ಟೆ ವಿತರಣೆ, ಕಾರ್ಯದರ್ಶಿಗಳಿಗೆ ಬ್ಯಾಗ್​ ವಿತರಿಸಿ ಮಾತನಾಡಿದರು.
ಕಾರ್ಯದರ್ಶಿಗಳು ಡೇರಿಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಜತೆಗೆ ಹಾಲು ಉತ್ಪಾದನೆ ಹೆಚ್ಚಳ ಗೊಳಿಸಲು ರೈತರಿಗೆ ಸಲಹೆ ಮತ್ತು ಆಸಕ್ತಿ ಮೂಡುವಂತೆ ಮಾಡಬೇಕು. ಪ್ರತಿದಿನ 1 ಲಕ್ಷ ಲೀಟರ್​ ಹಾಲು ಉತ್ಪಾದನೆ ನಮ್ಮ ಸಂಕಲ್ಪವಾಗಿದ್ದು, ಹಾಲಿನ ಉತ್ಪಾದನೆ ಹೆಚ್ಚಳ ಗೊಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕಿನಲ್ಲಿ 12 ಹಾಲು ಶೇಖರಣೆ ಉಪಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ತಾಲೂಕಿನ ಎಲ್ಲ್ಲ ಗ್ರಾಮಗಳಲ್ಲಿ ಡೇರಿ ಸ್ಥಾಪನೆ ಮಾಡಬೇಕೆಂಬ ಉದ್ದೇಶ ನಮ್ಮದಾಗಿದ್ದು, ಆಸಕ್ತ ರೈತರು ಡೇರಿ ಸ್ಥಾಪನೆಗೆ ಮುಂದಾದರೆ ಒಕ್ಕೂಟ ಸಹಕಾರ ನೀಡುತ್ತದೆ ಎಂದರು.
ತುಮಕೂರು ಹಾಲು ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ಡಾ.ಟಿ.ವಿ. ಶ್ರೀನಿವಾಸ್​ ಮಾತನಾಡಿ, ಶಿರಾ ತಾಲೂಕಿನಲ್ಲಿ ಹಾಲು ಉತ್ಪಾದಕರು ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜಿಲ್ಲೆಗೆ ಮಾದರಿಯಾಗಿದ್ದಾರೆ. ಶಿರಾದಲ್ಲಿ ಹಾಲು ಉತ್ಪಾದನೆ ಬೆಳವಣಿಗೆ ಶೇ.48ರಷ್ಟಿದ್ದು, ಮುಂದಿನ ದಿನಗಳಲ್ಲಿ ಶಿರಾ ಕ್ಷೀರ ಕ್ರಾಂತಿ ಮಾಡುವಂತ ಹೆಜ್ಜೆ ಇಡುತ್ತಿದೆ ಎಂಬುದನ್ನು ಸಾಕ್ಷಿ ಕರಿಸುತ್ತದೆ ಎಂದರು.
ಉಪ ವ್ಯವಸ್ಥಾಪಕ ಬಿ. ಗಿರೀಶ್​ ಮಾತನಾಡಿ, ಇಂತಹ ಬೇಸಿಗೆ ಸಂದರ್ಭದಲ್ಲಿ ತಾಲೂಕಿನಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ ಕಂಡಿರುವುದು ಉತ್ಪಾದಕರ ಆಸಕ್ತಿ ಮತ್ತು ಇಚ್ಛಾಶಕ್ತಿ ಕಾರಣ. ಪ್ರತಿದಿನ 82 ಸಾವಿರ ಲೀಟರ್​ ಹಾಲು ಉತ್ಪಾದನೆಯಾಗುತ್ತಿದ್ದು, ಅತಿ ಶೀಘ್ರದಲ್ಲಿಯೇ ಪ್ರತಿದಿನ ಒಂದು ಲಕ್ಷ ಲೀಟರ್​ ಹಾಲು ಉತ್ಪಾದನೆ ಮಾಡುವತ್ತ ಶಿರಾ ದಿಟ್ಟ ಹೆಜ್ಜೆ ಇಡಲಿದೆ ಎಂದರು.