ಸೇಡಂ ತಾಲೂಕಿನ ಮಾಧವಾರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಶಿವಕುಮಾರ ಪಾಟೀಲ್, ವೆಂಕಟರೆಡ್ಡಿ ಪಾಟೀಲ್, ನಾಗಚಿತ್ರ ಇತರರಿದ್ದರು.
- ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕರೆ
- ಮಾಧವಾರದಲ್ಲಿ ಬಾಬಾ ಸಾಹೇಬ್ ಜಯಂತಿ
ಸೇಡಂ: ವರ್ಷಕ್ಕೊಮ್ಮೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ಮೋಜು-ಮಸ್ತಿ ಮಾಡುವುದರಲ್ಲಿ ಅರ್ಥವಿಲ್ಲ.ಅವರು ಕಂಡ ಕನಸಿನಂತೆ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಕೋಡ್ಲಾ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಮಾಧವಾರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಹಿಂದಿನಿಂದಲೂ ಶೋಷಿತ ಸಮುದಾಯ ಮೂಢನಂಬಿಕೆ, ಆಚರಣೆಗಳಿಗೆ ಹೆಚ್ಚಿನ ಒತ್ತು ಕೊಡುವ ಮೂಲಕ ಬದುಕನ್ನು ನಾಶ ಮಾಡಿಕೊಂಡಿದೆ. ನಮಗೆ ಕಷ್ಟ ಬಂದಾಗ ರಕ್ಷಣೆಗೆ ಸಂವಿಧಾನವೇ ಹೊರತು ನೀವು ನಂಬಿದ ದೇವರಲ್ಲ. ಹೀಗಾಗಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಬಾಬಾ ಸಾಹೇಬರ ಕನಸು ಸಕಾರಕ್ಕೆ ನಾವು ಶ್ರಮಿಸಬೇಕಾಗಿದೆ ಎಂದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವ ಜನಾಂಗದ ಬಾಳು ಬೆಳಗುವಲ್ಲಿ ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಿದಾಗ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್ ತೆಲ್ಕೂರ (ಜಿಕೆ), ಗ್ರಾಪಂ ಪಿಡಿಒ ನಾಗಚಿತ್ರ, ಪ್ರಮುಖರಾದ ವೆಂಕಟರೆಡ್ಡಿ ಪಾಟೀಲ್, ನಾಗರತ್ನ, ಶಿವಕುಮಾರ ತೊಟ್ನಳ್ಳಿ, ಜೈಭೀಮ ಊಡಗಿ, ಈಶ್ವರಾಜ ಮಾಧವಾರ, ಸುನೀಲ್ ಹಳ್ಳಿ, ಶ್ರೀನಿವಾಸ ಸಂಗಾವಿ, ರಾಮಕೃಷ್ಣರೆಡ್ಡಿ ಮಾಧವಾರ, ಶ್ರೀಶೈಲ ಬಟಗೇರಾ, ಶ್ರೀಶೈಲ್ ಅಗಸಾಲ ಇತರರಿದ್ದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸತ್ಕರಿಸಲಾಯಿತು. ನರಸಪ್ಪ ರಂಗವಾರ ಸ್ವಾಗತಿಸಿದರು. ಬಸವರಾಜ ರಂಗವಾರ ನಿರೂಪಣೆ ಮಾಡಿದರು. ನರಸಿಂಹಲು ವಂದಿಸಿದರು.