ಹನೂರಿನ ಚಾಮುಲ್ ಉಪ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕೃತ ಮಾರಾಟಗಾರರ ಸಭೆಯನ್ನು ಅಧ್ಯಕ್ಷ ನಂಜುಂಡಸ್ವಾಮಿ ಉದ್ಘಾಟಿಸಿದರು. ಉದ್ದನೂರು ಪ್ರಸಾದ್, ಶಾಹುಲ್ ಆಹಮದ್, ರಾಜ್‌ಕುಮಾರ್, ಹನೂರು ರವಿ ಇತರರು ಇದ್ದರು. 
ರಾಜ್ಯ

ನಂದಿನಿ ಉತ್ಪನ್ನ ಮಾರಾಟಕ್ಕೆ ಆದ್ಯತೆ ನೀಡಿ

ಹನೂರು: ಹಾಲು ಉತ್ಪಾದಕರು ಹಾಗೂ ನಂದಿನಿ ಉತ್ಪನ್ನಗಳ ಮಾರಾಟಗಾರರು ಒಕ್ಕೂಟಕ್ಕೆ ಎರಡು ಕಣ್ಣುಗಳಿದ್ದಂತೆ. ಒಕ್ಕೂಟದ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ತಿಳಿಸಿದರು.

ಪಟ್ಟಣದ ಚಾಮುಲ್ ಉಪ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಧಿಕೃತ ಮಾರಾಟಗಾರರ ಕುಂದು ಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇದರಿಂದ ಒಕ್ಕೂಟಕ್ಕೆ ಉತ್ತಮ ರೀತಿಯಲ್ಲಿ ಹಾಲು ಪೂರೈಕೆಯಾಗುತ್ತಿದೆ. ಹಾಗೆಯೇ ಮಾರಾಟಗಾರರು ಹಾಲು, ಮೊಸರು ಸೇರಿದಂತೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವುದರ ಮೂಲಕ ಉತ್ತಮ ಮಾರುಕಟ್ಟೆ ವ್ಯವಸ್ಥೆಗೆ ಶ್ರಮಿಸುತ್ತಿದ್ದಾರೆ. ಉತ್ಪಾದಕರು ಹಾಗೂ ಮಾರಾಟಗಾರರ ಹಿತ ಕಾಪಾಡುವುದು ಒಕ್ಕೂಟದ ಆದ್ಯ ಕರ್ತವ್ಯ. ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸುವುದರ ಜತೆಗೆ ಬೇಡಿಕೆ ಈಡೇರಿಸುವುದಕ್ಕೆ ಒಕ್ಕೂಟ ಬದ್ಧವಾಗಿದೆ ಎಂದರು.

ಇನ್ನು ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಸುಸಜ್ಜಿತ ನಂದಿನಿ ಕೇಂದ್ರ ತೆರೆದು ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ. ನಂದಿನಿ ಉತ್ಪನ್ನಗಳು ವಿಶ್ವಾಸಾರ್ಹತೆ ಹೊಂದಿದ್ದು, ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಖಾಸಗಿ ಸಂಸ್ಥೆ ಹಾಲಿನ ಮಾರಾಟದಿಂದ ಮುಕ್ತಗೊಂಡು ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಚಾಕಲೇಟ್ ಪೂರೈಸಿ: ಈ ಹಿಂದೆ ನಂದಿನಿ ಕೇಂದ್ರಗಳಿಗೆ 1 ರೂ.ಚಾಕಲೇಟ್ ಅನ್ನು ಒಕ್ಕೂಟದಿಂದ ಪೂರೈಸಲಾಗುತ್ತಿತ್ತು. ಇದರಿಂದ ಚಿಲ್ಲರೆ ಸಮಸ್ಯೆ ಇರಲಿಲ್ಲ. ಆದರೀಗ ಚಾಕಲೇಟ್ ಪೂರೈಕೆ ಸ್ಥಗಿತಗೊಂಡಿದ್ದು, ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಚಾಕಲೇಟ್ ಪೂರೈಕೆ ಆರಂಭಿಸಬೇಕು ಎಂದು ಸಭೆಯಲ್ಲಿದ್ದ ಮಾರಾಟಗಾರರದಿಂದ ಒತ್ತಾಯ ಕೇಳಿ ಬಂತು.

ಗ್ರಾಮಗಳಲ್ಲಿ ನಂದಿನಿ ಉತ್ಪನ್ನಗಳ ಬಗ್ಗೆ ಗೋಡೆಬರಹ, ಭಿತ್ತಿ ಪತ್ರಗಳ ಹಂಚಿಕೆ, ಜನರಲ್ಲಿ ಅರಿವು ಮೂಡಿಸುವುದು, ವಿಮೆಯಲ್ಲಿ ಸುಧಾರಣೆ ಇನ್ನಿತರ ಬೇಡಿಕೆಗಳ ಕುರಿತು ಮಾರಾಟಗಾರರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಕೂಡಲೇ ಅಗತ್ಯ ಕ್ರಮವಹಿಸುವುದಾಗಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಭರವಸೆ ನೀಡಿದರು.

ಇದೇ ವೇಳೆ ನಂದಿನಿ ಮಾರಾಟ ಮಳಿಗೆ ಇಲ್ಲದ ಗ್ರಾಮಗಳಲ್ಲಿ ಕೇಂದ್ರ ತೆರೆಯುವ ಸಂಬಂಧ ಚರ್ಚಿಸಲಾಯಿತು. ಮಾರಾಟಗಾರರಿಗೆ ಹೊಸ ವರ್ಷದ ಅಂಗವಾಗಿ ಉಡುಗೊರೆ ನೀಡಲಾಯಿತು. ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್, ಶಾಹುಲ್ ಆಹಮದ್, ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್, ಮಾರುಕಟ್ಟೆ ವ್ಯವಸ್ಥಾಪಕ ಶಿವಕುಮಾರ್, ಸಹಾಯಕ ವ್ಯವಸ್ಥಾಪಕ ಉಲ್ಲಾಸ್, ಮಾರಾಟಗಾರರಾದ ಈಶ್ವರ್, ಹನೂರು ರವಿ, ಕನಕರಾಜು, ಜಗದೀಶ್, ಪ್ರಿಯಾ, ಮಧು ಇತರರು ಇದ್ದರು.