ಶ್ರವಣಬೆಳಗೊಳದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕುಮಟ್ಟದ ಪಿಯು ಕಾಲೇಜು ಕ್ರೀಡಾಕೂಟವನ್ನು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ, ಎಚ್.ಬಿ.ಮದನಗೌಡ, ಎಚ್.ಎನ್. ಲೋಕೇಶ್, ಅಫ್ತಾಬ್ ಪಾಷಾ ಇತರರು ಇದ್ದರು.
ಶ್ರವಣಬೆಳಗೊಳ: ಲೌಕಿಕ ವ್ಯವಹಾರಗಳಿಗಾಗಿ ಸಂಬಂಧವನ್ನು ಮರೆಯಬಾರದು ಎಂದು ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಶ್ರವಣಬೆಳಗೊಳದ ಬಾಹುಬಲಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಸಮಾರಂಭದಲ್ಲಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ, ಸ್ಪರ್ಧೆಗಿಂತ ಪರಸ್ಪರ ಗೌರವ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡೆಯಿಂದ ವಂಚಿತರಾಗಬಾರದು. ವಿದ್ಯಾರ್ಥಿಗಳು ದೇಶದ ಭವಿಷ್ಯದ ಆಸ್ತಿಗಳಾಗಿದ್ದು, ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯನ್ನು ದೈಹಿಕ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದರು.
ತಾಲೂಕುಮಟ್ಟದ ಕ್ರೀಡಾಕೂಟ ನಡೆಸಲು ಸರ್ಕಾರದಿಂದ ಯಾವುದೇ ಅನುದಾನ ದೊರೆಯುತ್ತಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆ ಗುರುತಿಸಿ, ಅವರಿಗೆ ಅಗತ್ಯ ವೇದಿಕೆ ಹಾಗೂ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಶಾಸಕರು ಒತ್ತಾಯಿಸಿದರು.
ರಾಜ್ಯಮಟ್ಟದ ಸ್ಕೌಟ್ಸ್ -ಗೈಡ್ಸ್ ಕಾರ್ಯಾಗಾರ: ಶ್ರವಣಬೆಳಗೊಳದಲ್ಲಿ ರಾಜ್ಯಮಟ್ಟದ ಸ್ಕೌಟ್ ಆ್ಯಂಡ್ ಗೈಡ್ಸ್ ಕಾರ್ಯಾಗಾರ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ ಹಾಗೂ ದೇಶಪ್ರೇಮ ಬೆಳೆಸುವಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಶ್ರೀಕ್ಷೇತ್ರದ ಅಭಿವೃದ್ಧಿ ಹಾಗೂ ಮುಂಬರುವ ಮಹಾಮಸ್ತಕಾಭಿಷೇಕದ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಂತೆ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಲಾಗಿದೆ. ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಶಾಸಕರು ತಿಳಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ.ಮದನಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಲೋಕೇಶ್ ಹಡೆನಹಳ್ಳಿ, ಗ್ರಾಪಂ ಅಧ್ಯಕ್ಷ ಅಫ್ತಾಫ್ ಪಾಷಾ, ಪರಮ ದೇವರಾಜ್, ಜಿಲ್ಲಾ ಕ್ರೀಡಾ ಸಮನ್ವಯಾಧಿಕಾರಿ ಚಿಕ್ಕೇಗೌಡ, ಪ್ರಾಂಶುಪಾಲ ಡಾ.ಎಸ್.ದಿನೇಶ್, ಡಾ.ಸುನಿಲ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಟಿ.ಮಹೇಶ್, ಜೀವನ್, ಕಿರಣ್ ಕುಮಾರ್, ಕರವೇ ಮುಖಂಡ ಗಣೇಶಗೌಡ ಇತರರಿದ್ದರು.