ಇಂಡಿ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಾಲಯ ಉದ್ಘಾಟನೆ ಹಾಗೂ ಪ್ರಧಾನಿ ಮೋದಿ ಅವರ 12 ವರ್ಷಗಳ ಸಾಧನಾ ಸಮಾವೇಶವನ್ನು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿ ಮಾತನಾಡಿದರು. ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಹಣಮಂತರಾಯಗೌಡ ಪಾಟೀಲ, ಗುರುಲಿಂಗಪ್ಪ ಅಂಗಡಿ ಮತ್ತಿತರರಿದ್ದರು. 
ರಾಜ್ಯ

ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅತ್ಯವಶ್ಯ

ಪ್ರಮುಖ ಮುಖ್ಯಾಂಶಗಳು

  • ಸಂಸದ ರಮೇಶ ಜಿಗಜಿಣಗಿ ಅಭಿಪ್ರಾಯ
  • ಸಾಧನಾ ಸಮಾವೇಶ ಉದ್ಘಾಟನೆ
ಇಂಡಿ : ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ತೊಡಕಾಗಿದ್ದ ಸಂವಿಧಾನದಲ್ಲಿನ ಕಲಂ 370 ತೆಗೆದು ಹಾಕಿ, ಅದರ ಅಭಿವೃದ್ಧಿಗೆ ಚಾಲನೆ ನೀಡಿದ ಮಹಾನ್ ವ್ಯಕ್ತಿ. ಇಂತಹ ವ್ಯಕ್ತಿ ದೇಶಕ್ಕೆ ಅಗತ್ಯವಾಗಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತದ ಸಾಧನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಜಮ್ಮು ಕಾಶ್ಮೀರದಿಂದ ಲಡಾಕ್‌ವರೆಗೆ ವಿಶ್ವದಲ್ಲಿಯೇ ಎತ್ತರದ ರೈಲ್ವೆ ಹಳಿ ಹಾಕಿ ಆ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಭಯೋತ್ಪಾದಕರ ಹುಟ್ಟಡಗಿಸಲು ಆಪರೇಷನ್ ಸಿಂಧೂರ ಮಾಡಿ ದೇಶದಲ್ಲಿ ಶಾಂತಿ ನೆಲೆಸುವಂತೆ ಕ್ರಮ ಜರುಗಿಸಿದ್ದಾರೆ. ದೇಶದ 80 ಕೋಟಿ ಬಡ ಜನತೆಗೆ ಉಚಿತವಾಗಿ ಆಹಾರ ಧಾನ್ಯ ನೀಡಿ ಹಸಿವು ಮುಕ್ತದೇಶವನ್ನಾಗಿಸಿದ್ದಾರೆ ಎಂದ ಅವರು, ಇಡೀ ದೇಶದ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಹರ್ ಘರ್ ನಲ್ಲಿ ಯೋಜನೆಯನ್ನು ಜಾರಿಗೆ ತಂದು ಪ್ರತಿಯೊಬ್ಬರ ಮನೆಗೂ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.

ಕರೊನಾ ಮಹಾಮಾರಿಯ ಸಂದರ್ಭದಲ್ಲಿ ಔಷಧವನ್ನು ಕಂಡು ಹಿಡಿದು ಇಡೀ ದೇಶಕ್ಕಲ್ಲದೇ ಬೇರೇ ಬೇರೆ ದೇಶಗಳಿಗೆ ರಪ್ತು ಮಾಡಿ ಅದೆಷ್ಟೋ ಜನರನ್ನು ಕಾಪಾಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದರು. ಬೇರೆ ಬೇರೆ ದೇಶದವರು ಮೋದಿವರನ್ನು ಕೊಂಡಾಡುತ್ತಿದ್ದಾರೆ. ಆದರೆ ಅವರಿಗೆ ನಮ್ಮ ದೇಶದ ವಿರೋಧ ಪಕ್ಷದ ಕಾಂಗ್ರೆಸ್ ಮುಖಂಡರು ಸುಖಾ ಸುಮ್ಮನೆ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿಯ ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್.ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 42000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ, ಎಸ್‌ಸಿ, ಎಸ್ಟಿ ಅವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದಲ್ಲಿ ಪ್ರಮುಖರು ಮೃತಪಟ್ಟರೆ ಅವರ ಶವ ಸಂಸ್ಕಾರ ಮಾಡಲು ಹಣವಿಲ್ಲ ಎಂದು ಗೇಲಿ ಮಾಡಿದ ಅವರು ಮುಂದಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ 52 ಸ್ಥಾನಗಳನ್ನೂ ಕೂಡಾ ಗೆಲ್ಲುವುದಿಲ್ಲ ಎಂದರು.

ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಇಂಡಿ ಬಿಜೆಪಿ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಕಾರ್ಯದರ್ಶಿ ಮಳುಗೌಡ ಪಾಟೀಲ, ಅನೀಲ ಮತ್ತಿತರರಿದ್ದರು.