‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ
- ಪೂಜೆ ಸಲ್ಲಿಸಿ ನಮಿಸಿದ ಪ್ರಧಾನಿ
ಆದಿಚುಂಚನಗಿರಿ: ಇಲ್ಲಿಯ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧಿಪತಿ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ ಗದ್ದುಗೆ ಇರುವ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟನೆ ಮಾಡಿದರು. ಆ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷೀಕರಿಸಿತು.
ಹೊಯ್ಸಳ, ಚಾಲುಕ್ಯ ಹಾಗೂ ಗಂಗರ ಕಾಲದ ಶಿಲ್ಪಕಲೆಯನ್ನು ಒಳಗೊಂಡಿರುವ ಈ ಮಂದಿರಕ್ಕೆ ಪ್ರಧಾನಿ ಮನಸೋತರು. ಇಳಕಲ್ಲು ಕೆಂಪುಕಲ್ಲಿನಿಂದ ನಿರ್ಮಿಸಿರುವ ಗರ್ಭಗುಡಿಯಲ್ಲಿರುವ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೂರ್ತಿಗೆ ಪೂಜೆ ಸಲ್ಲಿಸಿ ನಮಿಸಿದರು.
80 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಿರುವ ಈ ಮಂದಿರವನ್ನು ಒಂದು ಸುತ್ತು ಹಾಕಿ ಅಲ್ಲಿಯ ಸೌಂದರ್ಯವನ್ನೂ ಕಣ್ತುಂಬಿಕೊಂಡರು.
ವಿಧಾನಸಭಾ ಚುನಾವಣೆ ಕಾಲದಲ್ಲೂ ಇಲ್ಲಿಗೆ ಆಗಮಿಸಲು ಮೊದಲ ಆದ್ಯತೆ ಕೊಟ್ಟ ಪ್ರಧಾನಿ ಅವರನ್ನು ಕಂಡು ನೆರೆದ ಜನಸ್ತೋಮ ಜೈಕಾರ ಹಾಕಿ ಸಂಭ್ರಮಿಸಿತು.
ಜನಸಮೂಹವನ್ನು ಉದ್ದೇಶಿಸಿ ಸಭಾವೇದಿಕೆಯಲ್ಲಿ 20 ನಿಮಿಷ ಮಾತನಾಡಿದ ಮೋದಿ ಅವರು, ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಹಾನ್ ಸಂತ ಎಂದು ಬಣ್ಣಿಸಿದರು.
ಸಮಾಜದಲ್ಲಿ ಮಹಾನ್ ಸಂತರ ಪರಿವರ್ತನಾಶೀಲ ಪಾತ್ರವನ್ನು ವಿವರಿಸಿದ ಮೋದಿ, ಬಾಲಗಂಗಾಧರನಾಥಶ್ರೀಗಳು ಆಧ್ಯಾತ್ಮಿಕ ಶಕ್ತಿಯು ಸಾಮಾನ್ಯ ಮನುಷ್ಯ ಮತ್ತು ಗ್ರಾಮೀಣ ಯುವಕರ ಹೋರಾಟಗಳನ್ನು ಪರಿಹರಿಸುವುದರೊಂದಿಗೆ ಆಳವಾಗಿ ಬೆಸೆದುಕೊಂಡಿತ್ತು.
ಆ ದೈವಿಕ ವ್ಯಕ್ತಿತ್ವವು ಭಕ್ತಿಯನ್ನು ಪಲಾಯನವಾದ ಎಂದು ಪರಿಗಣಿಸದೆ, ಜನಸಾಮಾನ್ಯರ ಉನ್ನತಿಗಾಗಿ ಶ್ರಮಿಸುವ ಸಕ್ರಿಯ ಜವಾಬ್ದಾರಿ ಎಂದೇ ಭಾವಿಸಿದ್ದರು. ಸಮಾಜದ ಕಲ್ಯಾಣಕ್ಕಾಗಿ ಜವಾಬ್ದಾರಿಯನ್ನು ಹೊರಲು ಮುಂದೆ ಬರುವುದೇ ನಿಜವಾದ ಭಕ್ತಿ ಎಂದೂ ನುಡಿದರು.
ಶ್ರೀಗಳು ವ್ಯಾಪಕ ಲೋಕೋಪಕಾರಿ ಉಪಕ್ರಮ ಕುರಿತು ಬೆಳಕು ಚೆಲ್ಲಿದ ಅವರು, ಹಿಂದುಳಿದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೈದ್ಯಕೀಯದಂತಹ ವೃತ್ತಿಪರ ಪದವಿಗಳವರೆಗೆ ಎಲ್ಲವನ್ನೂ ನೀಡುವ ಹಲವಾರು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣೀಭೂತರಾದರು.
ಆರೋಗ್ಯ ರಕ್ಷಣೆಯ ಬಗ್ಗೆ ಮಠದ ದೂರದೃಷ್ಟಿಯ ಧೋರಣೆಯು ಗುಣಮಟ್ಟದ ವೈದ್ಯಕೀಯ ಸೇವೆ ತಾರತಮ್ಯವಿಲ್ಲದೆ ಎಲ್ಲರಿಗೂ ತಲುಪುವಂತಾಗಿದೆ. ಗುಣಮಟ್ಟದ ಆರೋಗ್ಯ ಸೇವೆಯು ಪ್ರತಿಯೊಬ್ಬ ನಾಗರಿಕನಿಗೆ ಲಭ್ಯವಿರುವ ಹಕ್ಕಾಗಬೇಕೇ ಹೊರತು, ಆಯ್ದ ಕೆಲವರಿಗಷ್ಟೇ ಸೀಮಿತವಾದ ಸೌಲಭ್ಯವಾಗಬಾರದು ಎಂದೂ ಪ್ರತಿಪಾದಿಸಿದರು.
ಮಠದ ಮಾನವೀಯ ಪ್ರಯತ್ನಗಳು ಮತ್ತು ಸರ್ಕಾರದ ಕಲ್ಯಾಣ ನೀತಿಗಳ ನಡುವಿನ ಸಾಮ್ಯತೆ ಉಲ್ಲೇಖಿಸಿದ ಮೋದಿ ಅವರು, ಕೋಟ್ಯಂತರ ಬಡ ನಾಗರಿಕರಿಗೆ ಉಚಿತ ಆಸ್ಪತ್ರೆ ಚಿಕಿತ್ಸೆ ನೀಡುವಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಯಶಸ್ಸಿಯಾಗಿದೆ. 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರನ್ನು ಒಳಗೊಳ್ಳುವಂತೆ ಈ ಯೋಜನೆಯನ್ನು ಇತ್ತೀಚೆಗೆ ವಿಸ್ತರಿಸಲಾಗಿದೆ. ಹಿರಿಯರು ಅತ್ಯಗತ್ಯ ಆರೋಗ್ಯ ಸೌಲಭ್ಯಗೌರವಯುತವಾಗಿ ಪಡೆಯುವುದನ್ನು ಖಚಿತಗೊಳಿಸಲಾಗಿದೆ ಎಂದು ನುಡಿದರು.
ಪ್ರಸ್ತುತ ಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ತಮ್ಮ ಗುರುಗಳ ಹಾದಿಯನ್ನು ನಿಷ್ಠೆಯಿಂದ ಅನುಸರಿಸುವ ಮೂಲಕ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸಿದ್ದು, ಇದು ಅವರು ಹೊಂದಿರುವ ಸಮರ್ಪಣಾ ಮನೋಭಾವವನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಹೊಸದಾಗಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರವು ಕೇವಲ ಒಂದು ಭೌತಿಕ ರಚನೆಯಾಗಿ ಉಳಿಯದೆ, ಆಳವಾದ ಆಧ್ಯಾತ್ಮಿಕ ಭಕ್ತಿಯ ನೈಜ ಸಾಕ್ಷಾತ್ಕಾರವಾಗಿದೆ. ಈ ದೇವಾಲಯವು ನಿಸ್ಸಂದೇಹವಾಗಿ ಸೇವೆ ಮತ್ತು ಸ್ಫೂರ್ತಿಯ ಶಾಶ್ವತ ದಾರಿದೀಪವಾಗಿ ಕಾರ್ಯನಿರ್ವಹಿಸಲಿದೆ ಎಂದರು.
‘ಸೌಂದರ್ಯ ಲಹರಿ ಮತ್ತು ಶಿವಮಹಿಮ್ನಃ ಸ್ತೋತ್ತಮ್’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಜಕೋಟದ ಅರ್ಷ ವಿದ್ಯಾಮಂದಿರದ ಸ್ವಾಮಿ ಪರಮಾನಾತ್ಮನಂದ ಸರಸ್ವತಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇದ್ದರು.
ಮೋದಿಗೆ ನವಿಲಿನ ಸ್ಮರಣಿಕೆ
ಶ್ರೀ ಆದಿಚುಂಚನಗಿರಿ ಶ್ರೀಕ್ಷೇತ್ರವನ್ನು ಮಯೂರ ವನ ಎಂದು ವಾಡಿಕೆ. ಈ ಹಿನ್ನೆಲೆಯಲ್ಲಿ ನವಿಲಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಪ್ರಧಾನಿ ಮೋದಿ ಅವರಿಗೂ ನವಿಲಿನ ಪ್ರತಿಕೃತಿ ಇರುವ ಕಾಣಿಕೆಯನ್ನು ನೀಡಿ ಸತ್ಕರಿಸಲಾಯಿತು.
ತಮ್ಮ ಭಾಷಣದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ನವಿಲು ದೇಶದ ರಾಷ್ಟ್ರಪಕ್ಷಿ. ಸುಬ್ರಹ್ಮಣ್ಯಸ್ವಾಮಿಯ ವಾಹನ ಸಹ ಹೌದು. ಇದು ಶಾಂತ, ಸುಂದರತೆಯ ಪ್ರತಿರೂಪ. ದೆಹಲಿಯಲ್ಲಿರುವ ನಮ್ಮ ಸರ್ಕಾರಿ ಮನೆಯಲ್ಲೂ ನವಿಲುಗಳಿವೆ. ಅವುಗಳೊಂದಿಗೆ ನಮ್ಮ ದೋಸ್ತಿ ಸಹ ಚೆನ್ನಾಗಿ ಇದೆ ಎಂದು ವೈಯಕ್ತಿಕ ಅನುಭವ ಹಂಚಿಕೊಂಡರು.
ಎಲ್ಲ ಜೀವಿಗಳ ಮೇಲೆ ಬಾಲಗಂಗಾಧರ ಶ್ರೀಗಳಿಗಿದ್ದ ಅಪಾರ ಕರುಣೆಯನ್ನು ಸ್ಮರಿಸಿದರು. ನವಿಲುಗಳನ್ನು ರಕ್ಷಿಸಲು ಅವರು ನಡೆಸಿದ ಸಮರ್ಪಿತ ಸಾಮಾಜಿಕ ಚಳವಳಿ ಶ್ಲಾಘನೀಯ. ಇದನ್ನು ಪರಿಸರ ಸಂರಕ್ಷಣೆ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆ ಎರಡಕ್ಕೂ ಅವರು ಬೆಸೆದರು ಎಂದು ಹೇಳಿದರು.
ಕಾಲಭೈರವೇಶ್ವರಿಗೆ ಪ್ರಧಾನಿ ಪೂಜೆ
ಆದಿಚುಂಚನಗಿರಿ ಗಿರಿತಪೋವನದ ಹೆಲಿಪ್ಯಾಡ್‌ಗೆ ಬೆಳಗ್ಗೆ 10.50ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇನಾ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದರು. ಹೆಲಿಪ್ಯಾಡ್‌ನಿಂದ ಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ಕಾರಿನಲ್ಲಿ ಆಗಮಿಸಿದ ಪ್ರಧಾನಿ ಮೋದಿ ಅವರೊಂದಿಗೆ ಕೇಂದ್ರ ಸಚಿವ ಎಚ್‌ಡಿಕೆ ಪಯಣಿಸಿದರು.
ಕಾಲಭೈರವೇಶ್ವರ, ಪರಿವಾರ ದೇವತೆಗಳ ಜತೆಗೆ ಜ್ವಾಲಪೀಠ(ಉರಿಗದ್ದುಗೆ) ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಗದ್ದುಗೆ ಸ್ಥಳದಲ್ಲಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಿದರು. 11.17ಕ್ಕೆ ಕಾರಿನಲ್ಲಿ ತೇರು ಬೀದಿ ಮೂಲಕ ಬಿ.ಜಿ.ಎಸ್. ಕ್ರೀಡಾಂಗಣದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಕಾರ್ಯಕ್ರಮ ಮುಗಿಸಿ 12.30ಕ್ಕೆ ಕ್ರೀಡಾಂಗಣದಿಂದ ಮಠದ ಎಡಬದಿಯ ರಸ್ತೆ ಮೂಲಕ ಹೆಲಿಪ್ಯಾಡ್‌ಗೆ ತೆರಳಿ, ಅಲ್ಲಿಂದ ಬೆಂಗಳೂರಿಗೆ ಹೊರಟರು.