- * ಹೂವು-ಹಣ್ಣಿನ ದರ ಹೆಚ್ಚಳ
- * ಮಳೆ ಕೊರತೆಯಿಂದ ತಗ್ಗಿದ ಇಳುವರಿ
ಬೆಂಗಳೂರು: ಗೌರಿ- ಗಣೇಶ ಹಬ್ಬದ ಆಚರಣೆಗೆ ನಗರ ಸಜ್ಜಾಗುತ್ತಿದ್ದು, ಮೂರು ದಿನ ಮುಂಚಿತವಾಗಿಯೇ ನಗರದಲ್ಲಿ ಖರೀದಿ ಭರಾಟೆ ಹೆಚ್ಚಿದೆ. ಶುಕ್ರವಾರ ಪ್ರಮುಖ ಮಾರುಕಟ್ಟೆಗಳಿಗೆ ಹೂವು, ಹಣ್ಣು, ಬಾಳೆಕಂದು ಯಥೇಚ್ಛವಾಗಿ ಆಗಮಿಸಿದ್ದು, ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.
ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವಿನ ದರ ಹೆಚ್ಚಿದ್ದು, ಗೌರಿ-ಗಣೇಶ ಹಬ್ಬದ ವೇಳೆಗೆ ಇಳಿಕೆಯಾಗುತ್ತಿತ್ತು. ಆದರೆ, ಈ ಬಾರಿ ಮುಂಗಾರು ಮಳೆ ಇಲ್ಲದ ಕಾರಣ ಬರ ಎದುರಾಗಿದ್ದು, ನೀರಿನ ಕೊರತೆಯಿಂದಾಗಿ ಇಳುವರಿ ತಗ್ಗಿದೆ. ಹಾಗಾಗಿ ಹಬ್ಬಕ್ಕೆ ಹೂವು-ಹಣ್ಣು ಸೇರಿ ಎಲ್ಲವೂ ದುಬಾರಿಯಾಗಿದ್ದು ಗ್ರಾಹಕರ ಕೈ ಸುಡುತ್ತಿದೆ. ಆದಾಗ್ಯೂ ಹಬ್ಬಕ್ಕಾಗಿ ತಮ್ಮ ಶಕ್ತ್ಯಾನುಸಾರ ಜನರು ಖರೀದಿಯಲ್ಲಿ ತೊಡಗಿದ್ದಾರೆ.
ನಗರದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ದಾಸರಹಳ್ಳಿ, ಪೀಣ್ಯ, ಗಾಂಧಿ ಬಜಾರ್ ಸೇರಿ ಪ್ರಮುಖ ಮಾರುಕಟ್ಟೆಗಳು ಹಬ್ಬದ ಹಿನ್ನೆಲೆಯಲ್ಲಿ ಜನರಿಂದ ತುಂಬಿವೆ. ಈ ಬಾರಿ ಸಗಟು ದರವೇ ಏರಿಕೆಯಾಗಿರುವುದರಿಂದ ಚಿಲ್ಲರೆ ವ್ಯಾಪಾರಿಗಳಲ್ಲಿ ಹೂವು-ಹಣ್ಣುಗಳ ದರ ಮತ್ತಷ್ಟೂ ಏರಿಕೆಯಾಗಿದೆ.
ಗೌರಿ ಹಬ್ಬ ಎಂದರೆ ಹೆಣ್ಣು ಮಕ್ಕಳಿಗೆ ಸಂಭ್ರಮ. ತವರು ಮನೆಯಿಂದ ಬಾಗಿನ ಬರುತ್ತದೆ ಎಂಬ ಸಂತಸ. ಹಾಗಾಗಿ ಮಾರುಕಟ್ಟೆಯಲ್ಲಿ ಬಾಗಿನ ಸಾಮಗ್ರಿಗಳಿಗೆ ವಿಶೇಷ ಬೇಡಿಕೆ ಇತ್ತು. ಮೊರ (ಜೋಡಿ) ಬೆಲೆ 120ರಿಂದ 150 ರೂ., ಅದರಲ್ಲಿಟ್ಟು ಕೊಡುವ ಧಾನ್ಯಗಳು, ಅರಿಶಿನ-ಕುಂಕುಮ, ಗಾಜಿನ ಬಳೆಗಳು ಹಾಗೂ ಬಾಗಿನದ ಇತರೆ ಮಂಗಳ ದ್ರವ್ಯಗಳನ್ನು ಒಳಗೊಂಡ ಪೂರ್ಣ ಬಾಗಿನದ ಸಿದ್ಧ ಕಿಟ್‌ಗಳೂ ಲಭ್ಯವಿದ್ದು, 400-600 ರೂ.ವರೆಗೆ ಮಾರಾಟವಾಗುತ್ತಿವೆ. ಇನ್ನು ಗಣೇಶನಿಗೆ ಪ್ರಿಯವಾದ ಗರಿಕೆ ಒಂದು ಕಟ್ಟಿಗೆ 25 ರೂ., ಬಿಲ್ವಪತ್ರೆ 50 ರೂ., ಮಾವಿನೆಲೆ 30-40 ರೂ., ಬಾಳೆಕಂಬ ಜೋಡಿಗೆ 50ರಿಂದ 200 ರೂ.ನಂತೆ ಮಾರಾಟವಾಗುತ್ತಿವೆ. ಹಬ್ಬಕ್ಕೆ ದರ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಬರದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳ ದರವೂ ಏರಿಕೆಯಾಗಿದ್ದು. ಈರುಳ್ಳಿ ಕೆ.ಜಿ.ಗೆ 60-70 ರೂ., ಬೀನ್ಸ್ 80-100 ರೂ., ಬೀಟ್‌ರೋಟ್ 50 ರೂ., ಬಿಳಿ ಬದನೆಕಾಯಿ 66 ರೂ., ಆಲೂಗಡ್ಡೆ 40-50 ರೂ., ಟೊಮ್ಯಾಟೊ 25-30 ರೂ., ಈರೇಕಾಯಿ 60 ರೂ. ದರದಲ್ಲಿ ಮಾರಾಟವಾಗುತ್ತಿದೆ.
ಕೆ.ಆರ್. ಮಾರುಕಟ್ಟೆ ಸಗಟು ದರ (ಕೆ.ಜಿ.ಗಳಲ್ಲಿ)
ಹಣ್ಣುಗಳ ದರ
ಏಲಕ್ಕಿ ಬಾಳೆಹಣ್ಣು 100-120 ರೂ.