ಹೊಸಕೋಟೆ ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್ವೆಲ್ ರಿಗ್ ಮಾಲೀಕರು ಬೋರ್ವೆಲ್ ಕೊರೆಸಲು ದರ ಏರಿಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮಾಲೀಕರಾದ ಚನ್ನಕೇಶವ, ಚರ್ಲಥನ್, ಶಾಂತಕುಮಾರ್, ಪ್ರಕಾಶ್, ಎಸ್.ಎಲ್.ಆರ್.ರಾಜ, ಷಣ್ಮುಗ, ಶಿವಣ್ಣ, ಕೃಷ್ಣಮೂರ್ತಿ ಇದ್ದರು.
ಹೊಸಕೋಟೆ : ಬೋರ್ವೆಲ್ ಕೊರೆಸುವ ವಸ್ತುಗಳ ಬೆಲೆ ಏರಿಕೆಯಿಂದ ಬೋರ್ವೆಲ್ ಮಾಲೀಕರು ತತ್ತರಿಸಿದ್ದು, ಏಜೆಂಟರು ಹಾಗೂ ಮಾಲೀಕರ ನಡುವಿನ ಜಟಾಪಟಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರು ಬೋರ್ವೆಲ್ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಗ್ರಾಮೀಣ ರಿಗ್ ಮಾಲೀಕರು ಬೋರ್ವೆಲ್ ಲಾರಿಗಳನ್ನು ನಿಲ್ಲಿಸಿ ಏಜೆಂಟರು ಹೊಸ ದರ ನಿಗದಿ ಮಾಡುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಪಟ್ಟು ಹಿಡಿದಿದ್ದಾರೆ. ಬೋರ್ವೆಲ್ ಮಾಲೀಕ ಚನ್ನಕೇಶವ ಮಾತನಾಡಿ, ಪ್ರಸ್ತುತ ಬಿಟ್, ಆಯಿಲ್, ಹ್ಯಾಮರ್, ಕಾರ್ಮಿಕ ಹಾಗೂ ನಿರ್ವಹಣಾ ವೆಚ್ಚ ಶೇ.30ರಿಂದ 50 ಹೆಚ್ಚಾಗಿರುವ ಪರಿಣಾಮ ರಿಗ್ ಮಾಲೀಕರು ಬೋರ್ವೆಲ್ ಲಾರಿಗಳ ನಿರ್ವಹಣೆಯೇ ಸವಾಲಿನ ಕೆಲಸವಾಗಿದೆ. ಈ ಮೊದಲು 43 ಸಾವಿರ ಇದ್ದ ಬಿಟ್ ಕಳೆದ 15 ದಿನಗಳಲ್ಲಿ 78 ಸಾವಿರ ರೂ.ಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ಅಲ್ಲದೆ, ಎಂಜಿನ್ ಆಯಿಲ್, ಡೀಸೆಲ್, ಪೈಪ್ಗಳು ಸೇರಿ ಎಲ್ಲ ವಸ್ತುಗಳು ಏರಿಕೆ ಕಂಡಿವೆ. ಇದರಿಂದ ಮಾಲೀಕರಿಗೆ ಲಾರಿಗಳ ಸಾಲ ಕಟ್ಟುವ ಜತೆಗೆ ಚಾಲಕರಿಗೆ ಸಂಬಳ ನೀಡುವುದು ಕಷ್ಟವಾಗಿದೆ. ಬೆಲೆ ಏರಿಕೆ ಕುರಿತು ಏಜೆಂಟರೊಂದಿಗೆ ಸಭೆ ನಡೆಸಿ ನಿರ್ಧರಿಸುವುದಾಗಿ ಭರವಸೆ ನೀಡಿದರು.
ಯುದ್ಧದಿಂದ ದರ ಏರಿಕೆ: ಬೋರ್ವೆಲ್ ಮಾಲೀಕ ಚರ್ಲಥನ್ ಮಾತನಾಡಿ, ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರಣ ಪೆಟ್ರೋಲ್, ಡೀಸೆಲ್ ದರ ಕೂಡ ಏರಿಕೆಯಾಗಿದ್ದು, ಪೆಟ್ರೋಲ್ ಬಂಕ್ಗಳಲ್ಲಿ ನಿತ್ಯ ಲಾರಿಗಳಿಗೆ 25 ಸಾವಿರ ರೂ. ಗೆ ಮಾತ್ರ ಡೀಸೆಲ್ ನೀಡುತ್ತಿದ್ದಾರೆ ಎಂದರು. ಕಳೆದ ಮೂರು ತಿಂಗಳ ಹಿಂದೆ ಪ್ರತಿಭಟನೆ ಮಾಡಿ 1 ಸಾವಿರ ಅಡಿಗೆ 1.40ಲಕ್ಷ ರೂ.ಇದ್ದ ದರವನ್ನು 1.60 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬಿಡಿ ಭಾಗಗಳು ಏರಿಕೆಯಾಗಿವೆ. ಇದರೊಂದಿಗೆ ಗ್ಯಾಸ್ ಅಭಾವದಿಂದ ಹೆಚ್ಚಿನ ಹಣ ನಿಡಿ ಗ್ಯಾಸ್ ಸಿಲಿಂಡರ್ ಖರೀದಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬೋರ್ವೆಲ್ ಕೊರೆಸಲು ಹೊಸ ದರ ನಿಗದಿ ಮಾಡಬೇಕಿದೆ ಎಂಡು ಒತ್ತಾಯಿಸಿದರು.
ಕಾರ್ಬೆಡ್ ರಫ್ತಿಲ್ಲ: ಬೋರ್ವೆಲ್ ಕೊರೆಯಲು ಪ್ರಮುಖವಾಗಿ ಬೇಕಾಗಿರುವ ಬಿಟ್ ತಯಾರಿಕೆಗೆ ಬಳಕೆ ಮಾಡುವ ಕಾರ್ಬೆಡ್ಅನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೇ ಕಾರ್ಬನ್ ವಸ್ತುವನ್ನು ಎಲೆಕ್ಟ್ರಿಕ್ ಸ್ಕೂಟರ್ಗಳ ಬ್ಯಾಟರಿಗೆ ಸಿದ್ಧಪಡಿಸಲು ಬಳಸುವುದರಿಂದ ಕಾರ್ಬೆಡ್ ಬೇಡಿಕೆ ಸಾಕಷ್ಟು ಹೆಚ್ಚಾಗಿದ್ದು, ಇದರಿಂದ ಚೀನಾದಿಂದ ಸಮರ್ಪಕವಾಗಿ ಕಾರ್ಬೆಡ್ ವಸ್ತು ಲಭ್ಯವಾಗುತ್ತಿಲ್ಲ. ಆದ್ದರಿಂದ ಬಿಟ್ನ ದರ 53 ಸಾವಿರದಿಂದ 78 ಸಾವಿರ ರೂ.ಗೆ ಏರಿಕೆಯಾಗಿದೆ ಎಂದು ಬೋರ್ವೆಲ್ ಮಾಲೀಕ ಚರ್ಲಥನ್ ತಿಳಿಸಿದರು.