ಹೊಸಕೋಟೆ ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್ವೆಲ್ ರಿಗ್ ಮಾಲೀಕರ ಹಾಗೂ ಏಜೆಂಟರ ಸಂಘದಿಂದ ಹಮ್ಮಿಕೊಂಡಿದ್ದ ಸಭೆ ಬಳಿಕ ಬೋರ್ವೆಲ್ ಕೊರೆಸಲು ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆ ಬಗ್ಗೆ ಲಾರೀ ಮಾಲೀಕರು ಪ್ರದರ್ಶಿಸಿ ಮಾಹಿತಿ ನೀಡಿದರು. ಬೋರ್ವೆಲ್ ಮಾಲೀಕರ ಚನ್ನಕೇಶವ, ಬೋರ್ವೆಲ್ ರಿಗ್ ಮಾಲೀಕ ಪ್ರಕಾಶ್, ಏಜೆಂಟರಾದ ಜಗದೀಶ್ ಸ್ವಾಮಿ ಇತರರು ಇದ್ದರು.
ಹೊಸಕೋಟೆ : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಬೋರ್ವೆಲ್ ಕೊರೆಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೋರ್ವೆಲ್ ಲಾರಿ ಮಾಲೀಕರು ಹಾಗೂ ಏಜೆಂಟರ ನಡುವೆ ಏರ್ಪಟ್ಟಿದ್ದ ಜಟಾಪಟಿ ತಿಳಿಯಾಗಿದೆ. ಬೋರ್ವೆಲ್ ಕೊರೆಸಲು 1 ಸಾವಿರ ಅಡಿಗೆ 1.80 ಲಕ್ಷ ರೂ. ದರ ನಿಗದಿ ಮಾಡಲಾಗಿದೆ ಎಂದು ಬೋರ್ವೆಲ್ ಮಾಲೀಕ ಚನ್ನಕೇಶವ ತಿಳಿಸಿದರು.
ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್ವೆಲ್ ರಿಗ್ ಮಾಲೀಕರು ಹಾಗೂ ಏಜೆಂಟರ ಸಂದ ಸಂಧಾನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೂ ಮೊದಲು 1 ಸಾವಿರ ಅಡಿಗೆ 1.60 ಲಕ್ಷ ರೂ. ನಿಗದಿ ಮಾಡಿದ್ದೆವು. ಆದರೆ, ಸದಸ್ಯ ಪರಿಸ್ಥಿತಿಯಲ್ಲಿ ಎಲ್ಲ ವಸ್ತುಗಳು ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಮಾಲೀಕರಿಗೆ ಹಳೆಯ ದರದಲ್ಲಿ ಬೋರ್ವೆಲ್ ಕೊರೆಯುವುದು ಅಸಾಧ್ಯವಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಯಿತು. ಅಂತಿಮವಾಗಿ ಸಭೆ ನಡೆಸಿ ಏಜೆಂಟರು 1.80ಲಕ್ಷ ರೂ. ಹೊಸ ದರ ನಿಗದಿ ಮಾಡಿದ್ದು, ರೈತರೂ ಸಹಕಾರ ನೀಡಬೇಕು ಎಂದರು.
ಬೋರ್ವೆಲ್ ರಿಗ್ ಮಾಲೀಕ ಪ್ರಕಾಶ್ ಮಾತನಾಡಿ, ಬೋರ್ವೆಲ್ನ ಒಂದು ಬಿಟ್ನ್ನು 1800 ಅಡಿವರೆಗೆ ಬಳಕೆ ಮಾಡಬಹುದಾಗಿದೆ. ಆದರೆ, ಒಮ್ಮೆ ಬಳಕೆ ಮಾಡಿದ್ದು ಮತ್ತೊಮ್ಮೆ ಬಳಕೆಗೆ ಬರೋಲ್ಲ. ಆದ್ದರಿಂದ ಹಳೇಯ ದರದಿಂದ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆ ವಾಹನಗಳನ್ನು ನಿಲ್ಲಿಸಲಾಗಿತ್ತು. ಈಗ ಅಂತಿಮವಾಗಿ ಸಭೆ ನಡೆಸಿ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಲಾಗಿದೆ ಎಂದರು.
ಸರ್ಕಾರಕ್ಕೆ ಮನವಿ: ಬೋರ್ವೆಲ್ ಮಾಲೀಕ ಜಗದೀಶ್ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಲಾರಿಗಳಿದ್ದು, ಸಾವಿರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ರಿಗ್ ಬೆಲೆಯನ್ನು ಏರಿಕೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದು, ಸರ್ಕಾರ ಈ ರೀತಿಯ ಬೆಲೆ ಏರಿಕೆಗೆ ಕಾರಣ ಹುಡುಕಿ ರೈತರು, ಲಾರಿ ಮಾಲೀಕರು, ಏಜೆಂಟರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ರಿಗ್ ಮಾಲೀಕರಾದ ಚನ್ನಕೇಶವ, ಚರ್ಲಥನ್, ಸುಬ್ರಹ್ಮಣಿ, ರಾಮಕೃಷ್ಣಶಂಕರ್, ಕುಮಾರನ್ ಪ್ರಕಾಶ್, ಆನಂದ್, ಷಣ್ಮುಗ, ಎಸ್ಆರ್ಎಲ್ ರಾಜ, ಎಸ್ಎಸ್ವಿ ಪೆರಿಸ್ವಾಮಿ, ಅಂಬಾಲ್ ಶೇಖರ್, ರಾಜಕೃಷ್ಣ ರಾಜವೆಲ್, ವೇಲವನ್, ಜಯಕೃಷ್ಣ, ಮೋಹನ್ ದೊಡ್ಡಬಳ್ಳಾಪುರ, ಧರಣಿಸ್ವಾಮಿ ಕೋಲಾರ, ಸಂಜು ಪರಮಶಿವ ಚಿಕ್ಕಬಳ್ಳಾಪುರ, ದಾಸರಹಳ್ಳಿ ಮಂಜು, ತೆನೆಯೂರು ನಾಗೇಶ್ ಹಾಜರಿದ್ದರು.