High court 
ರಾಜ್ಯ

ಮಹಿಳೆಯರ ಶೋಷಣೆ ತಡೆ ಐಟಿ ಕಾಯ್ದೆ ಉದ್ದೇಶ| High court

ಪ್ರಮುಖ ಮುಖ್ಯಾಂಶಗಳು

  • ಅಶ್ಲೀಲ ವಿಡಿಯೋ ಶೇರ್​ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್​ ನಕಾರ
ಬೆಂಗಳೂರು: ಮಹಿಳೆಯರ ಶೋಷಣೆಗಾಗಿ ಅಶ್ಲೀಲ ವಿಡಿಯೋಗಳನ್ನು ಹರಿಬಿಡುವುದನ್ನು ತಡೆಯುವುದು ಐಟಿ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಅರ್ಜಿದಾರರ ಮೊಬೈಲ್​ನಲ್ಲಿ ದತ್ತಾಂಶಗಳು ಪತ್ತೆಯಾಗಿಲ್ಲ ಎಂಬ ಕಾರಣಕ್ಕೆ ತನಿಖಾ ಹಂತದಲ್ಲೇ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ.
ಕಂಪನಿ ಮಾಲೀಕನಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ವಿಡಿಯೋವನ್ನು ಆಕೆಯ ಕುಟುಂಬಸ್ಥರಿಗೆ ಕಳಿಸಿದ ಆರೋಪದಲ್ಲಿ ಮಾಲೀಕನ ಪತ್ನಿ ವಿರುಧ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ವಿಚಾರಣಾ ನ್ಯಾಯಾಲಯವು ಪೂರ್ಣ ಪ್ರಮಾಣದ ವಿಚಾರಣೆಯ ಮೂಲಕವೇ ನಿರ್ಧರಿಸಲಿ. ಹೈಕೋರ್ಟ್​ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.

ಏನಿದು ಪ್ರಕರಣ?:

ಸಂತ್ರಸ್ತ ಮಹಿಳೆಯು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಈ ಸಂದರ್ಭದಲ್ಲಿ ಗ್ರಾಹಕರೊಬ್ಬರ ಕಾರಣದಿಂದ ಕಂಪನಿಗೆ ಲಾಂತರ ರೂಪಾಯಿ ನಷ್ಟ ಉಂಟಾಗಿತ್ತು. ಇದಕ್ಕೆ ಸಂತ್ರಸ್ತೆಯೇ ಕಾರಣ ಎಂದು ಆರೋಪಿಸಿದ್ದ ಕಂಪನಿಯ ಮಾಲೀಕ, ಆಕೆಗೆ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದನು. ಆನಂತರ ಈ ವಿಷಯದ ಬಗ್ಗೆ ಮಾತನಾಡಲು ಕರೆದು, ಆಕೆಗೆ ಪ್ರಜ್ಞೆ ತಪ್ಪಿಸುವ ಪಾನೀಯ ಕುಡಿಸಿ, ಖಾಸಗಿ ಹೊಟೇಲ್​ನಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ, ಆ ದೃಶ್ಯಗಳನ್ನು ತನ್ನ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದ. ಇದನ್ನು ತೋರಿಸಿ ಹಲವು ಬಾರಿ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ರೋಸಿ ಹೋಗಿದ್ದ ಸಂತ್ರಸ್ತೆ ಕಂಪನಿ ತೊರೆದಿದ್ದರು. ಇದಾದ ನಂತರ ಮಾಲೀಕನ ಪತ್ನಿ ಆ ವಿಡಿಯೋಗಳನ್ನು ಸಂತ್ರಸ್ತೆಯ ಪತಿ ಮತ್ತು ಸಹೋದರನಿಗೆ ವಾಟ್ಸಾಪ್​ ಮಾಡಿದ್ದರು. ಇದರಿಂದ ಸಂತ್ರಸ್ತೆಯ ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.