Padma Shri  
ರಾಜ್ಯ

Padma Shri: ಇಂದು ರಾಷ್ಟ್ರಪತಿ ಮುರ್ಮುರಿಂದ ಕರ್ನಾಟಕದ ಐವರು ಸಾಧಕರಿಗೆ ಪದ್ಮಶ್ರೀ ಪ್ರದಾನ

ನವದೆಹಲಿ: ಶಿಕ್ಷಣ, ಆರೋಗ್ಯ, ಮಾಧ್ಯಮ, ಉದ್ಯಮ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಕರ್ನಾಟಕದ ಐವರು ಸಾಧಕರಿಗೆ ಇಂದು(ಜೂ.23)ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿ(Padma Shri) ಪ್ರದಾನ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಾ. ಪ್ರಭಾಕರ್ ಕೋರೆ, ಶಶಿ ಶೇಖರ್ ವೇಂಪತಿ, ಡಾ. ಸುರೇಶ್ ಹನಗವಾಡಿ, ದಿವಂಗತ ಟಿ.ಟಿ. ಜಗನ್ನಾಥನ್ ಹಾಗೂ ಡಾ. ಶುಭಾ ವೆಂಕಟೇಶ್ ಅಯ್ಯಂಗಾರ್ ಅವರಿಗೆ ಈ ಗೌರವ ಲಭಿಸಲಿದೆ.

ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭಾಕರ್ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ವಿಸ್ತರಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.

ಪ್ರಸಾರ ಕ್ಷೇತ್ರದಲ್ಲಿ ಶಶಿ ಶೇಖರ್ ವೇಂಪತಿ ಸಾಧನೆ

ಪ್ರಸಾರ ಭಾರತಿ ಮಾಜಿ ಸಿಇಒ ಶಶಿ ಶೇಖರ್ ವೇಂಪತಿ ಅವರು ದೂರದರ್ಶನ ಮತ್ತು ಆಕಾಶವಾಣಿಯ ಡಿಜಿಟಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನೇತೃತ್ವದಲ್ಲಿ ಡಿಡಿ ಇಂಡಿಯಾ 92 ದೇಶಗಳಿಗೆ ವಿಸ್ತರಿಸಿತು. ಕೋವಿಡ್ ಅವಧಿಯಲ್ಲಿ ದೂರದರ್ಶನದಲ್ಲಿ 'ರಾಮಾಯಣ' ಮರುಪ್ರಸಾರ ಮಾಡಿ ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದಿದ್ದರು. ಅಲ್ಲದೆ, ಡಿಡಿ ಫ್ರೀ ಡಿಶ್ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಾರ್ಯಕ್ರಮಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ.
ಪ್ರಸಾರ ಭಾರತಿ ಮಾಜಿ ಸಿಇಒ ಶಶಿ ಶೇಖರ್ ವೇಂಪತಿ ಅವರು ದೂರದರ್ಶನ ಮತ್ತು ಆಕಾಶವಾಣಿಯ ಡಿಜಿಟಲೀಕರಣದಲ್ಲಿ ನೀಡಿದ ಕೊಡುಗೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಹಿಮೋಫಿಲಿಯಾ ರೋಗಿಗಳ ಆಶಾಕಿರಣ

ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆಯುವಂತೆ ಮಾಡಲು ನಿರಂತರ ಹೋರಾಟ ನಡೆಸಿದ ವೈದ್ಯ ಡಾ. ಸುರೇಶ್ ಹನಗವಾಡಿ ಅವರ ಸೇವೆಯನ್ನು ರಾಷ್ಟ್ರ ಗುರುತಿಸಿದೆ. ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಮೂಲಕ ಸಾವಿರಾರು ರೋಗಿಗಳ ಬದುಕಿನಲ್ಲಿ ಅವರು ಆಶಾಕಿರಣವಾಗಿದ್ದಾರೆ.

ಮರಣೋತ್ತರ ಗೌರವ

ಪ್ರೆಸ್ಟೀಜ್ ಸಂಸ್ಥೆಯನ್ನು ದೇಶದ ಪ್ರಮುಖ ಅಡುಗೆಮನೆ ಪರಿಕರ ಬ್ರ್ಯಾಂಡ್ ಆಗಿ ಬೆಳೆಸಿದ ದಿವಂಗತ ಉದ್ಯಮಿ ಟಿ.ಟಿ. ಜಗನ್ನಾಥನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಪ್ರದಾನವಾಗುತ್ತಿದೆ. ಪ್ರೆಷರ್ ಕುಕ್ಕರ್ ಸುರಕ್ಷತಾ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅದನ್ನು ಸಾರ್ವಜನಿಕ ಹಿತಕ್ಕಾಗಿ ಮುಕ್ತವಾಗಿ ಬಳಸಲು ಅವಕಾಶ ನೀಡಿದ್ದಕ್ಕಾಗಿ ಅವರು ಗುರುತಿಸಿಕೊಂಡಿದ್ದರು.

ವಿಜ್ಞಾನ ಕ್ಷೇತ್ರದ ಹೆಮ್ಮೆ

ವಿಜ್ಞಾನಿ ಡಾ. ಶುಭಾ ವೆಂಕಟೇಶ್ ಅಯ್ಯಂಗಾರ್ ಅವರು ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಅವರು ಅಭಿವೃದ್ಧಿಪಡಿಸಿದ ‘ದೃಷ್ಟಿ’ ವ್ಯವಸ್ಥೆ ಹಾಗೂ ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕೊಡುಗೆಗಳು ದೇಶದ ಸ್ವಾವಲಂಬನೆಗೆ ನೆರವಾಗಿವೆ.
ಇಂದು ನಡೆಯಲಿರುವ ಸಮಾರಂಭದ ಮೂಲಕ ಕರ್ನಾಟಕದ ಈ ಐವರು ಸಾಧಕರು ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಅಧಿಕೃತವಾಗಿ ಸ್ವೀಕರಿಸಲಿದ್ದು, ರಾಜ್ಯಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಸಿಗಲಿದೆ,(ಏಜೆನ್ಸೀಸ್​​).