ಮಾಸ್ತಮ್ಮ ಹಾಡಿಯಲ್ಲಿ ಅಭಿನಯಿಸಿದ ನಾಟಕ ಕಾರ್ಯಕ್ರಮದಲ್ಲಿ ಹಾರೋನಿಯಂ ಮಾಸ್ಟರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ರವಿಕುಮಾರ್, ಮಹೇಶ್, ಅರಗು ಮಂಜುನಾಥ್, ಮಹದೇವ್ ಇತರರು ಇದ್ದಾರೆ.
ಹನಗೋಡು: ಡಿಜಿಟಲ್ ಯುಗದ ತ್ವರಿತ ಮನರಂಜನೆಯ ಭರಾಟೆಯಲ್ಲಿ ಪೌರಾಣಿಕ ನಾಟಕಗಳಂತಹ ನಾಡಿನ ಶ್ರೀಮಂತ ಕಲಾ ಸಂಸ್ಕೃತಿ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಂಪರೆಯಾಗಿ ನೀಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಕರಣಕುಪ್ಪೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಚ್. ರವಿಕುಮಾರ್ ತಿಳಿಸಿದರು.
ಹನಗೋಡು ಹೋಬಳಿಯ ಮಾಸ್ತಮ್ಮನ ಹಾಡಿಯಲ್ಲಿ ಗುರುವಾರ ಆಯೋಜಿಸಿದ್ದ ಶನಿಪ್ರಭಾವ ಅಥವಾ ವಿಕ್ರಮವಿಜಯ ಪೌರಾಣಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಪೌರಾಣಿಕ ನಾಟಕಗಳು ನಿರಂತರವಾಗಿ ಪ್ರದರ್ಶನಗೊಂಡು ಜನಮಾನಸದಲ್ಲಿ ಆಳವಾದ ಪ್ರಭಾವ ಬೀರಿದ್ದವು. ನಾಟಕಗಳ ಪಾತ್ರಗಳು, ಸಂದೇಶಗಳು ಜನರ ಜೀವನಶೈಲಿಯಲ್ಲೇ ಅಳವಡಿಸಿಕೊಳ್ಳುವಷ್ಟು ಪ್ರಭಾವಶಾಲಿಯಾಗಿದ್ದವು. ಆದರೆ ಇಂದಿನ ದಿನಗಳಲ್ಲಿ ನಾಟಕ ಪ್ರದರ್ಶನಗಳೇ ಕ್ಷೀಣಿಸುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.
ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿಸುವ ಕಾರ್ಯದಲ್ಲಿ ಸಂಘ ಸಂಸ್ಥೆಗಳು ಮುಂಚೂಣಿಯಲ್ಲಿ ನಿಂತು ಯುವ ಪೀಳಿಗೆಗೆ ಮಾದರಿಯಾಗಬೇಕು. ಪೌರಾಣಿಕ ನಾಟಕಗಳ ಮೂಲಕ ಭಾರತೀಯ ಸಂಸ್ಕೃತಿ, ಮೌಲ್ಯಗಳು ಹಾಗೂ ಜೀವನದ ಆದರ್ಶಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಪತ್ರಕರ್ತ ದಾ.ರಾ.ಮಹೇಶ್ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿ ಬಿಂಬಿಸುವ ಹಾಗೂ ಪ್ರೇಕ್ಷಕರನ್ನು ಆಕರ್ಷಿಸುವ ನಾಟಕಗಳು ಹೆಚ್ಚಾಗಿ ಪ್ರದರ್ಶನಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ತಾ.ಪಂ. ಮಾಜಿ ಸದಸ್ಯ ಕೆ.ಗಣಪತಿ ಮಾತನಾಡಿ, ಹಳ್ಳಿಗಳಲ್ಲಿ ಅನೇಕ ಕಲಾಸಂಘಗಳು, ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪೌರಾಣಿಕ ನಾಟಕಗಳು, ರಂಗಗೀತೆ ಹಾಗೂ ಕಲಾತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಇವುಗಳಿಗೆ ಅಗತ್ಯ ಸಹಕಾರ ನೀಡುವ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಬನ್ನಿಕುಪ್ಪೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ಅರಗು ಮಂಜುನಾಥ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ವಕೀಲ ಗಣೇಶ್, ಶಿಕ್ಷಕ ಪಲ್ಗುಣ ಮಹದೇವ, ಪೊಲೀಸ್ ಇಲಾಖೆ ಪ್ರಕಾಶ್, ಗವಿಮಾದು, ರಾಮಕೃಷ್ಣ, ಜವರಯ್ಯ, ಗೋವಿಂದಬೋವಿ, ವೆಂಕಟೇಶ್, ನಿವೃತ್ತ ಯೋಧ ಪ್ರಸನ್ನ, ಚೆಲುವೇಗೌಡ ಇತರರಿದ್ದರು.