ವಾರಾಣಸಿ : ಭಾರತದ ಎಲ್ಲ ಆಚಾರ್ಯ ಪರಂಪರೆಗಳು ಒಂದಾಗಿ ಧರ್ಮ ಜಾಗೃತಿ ಕೈಂಕರ್ಯಗಳಲ್ಲಿ ಒಗ್ಗೂಡುವಿಕೆಯಿಂದ ಸನಾತನ ಧರ್ಮ ಸಂಸ್ಕೃತಿ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ. ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಕಾಶಿ ಜ್ಞಾನ ಪೀಠದ ಜಂಗಮವಾಡಿ ಮಠದಲ್ಲಿ ವಾಸ್ತವ್ಯ ಕೈಗೊಂಡು ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ವೈಷ್ಣವರು, ಶೈವರು, ವೀರಶೈವರು ಸೇರಿದಂತೆ ಭಾರತದ ಉದ್ದಗಲಕ್ಕೂ ಇರುವ ಎಲ್ಲ ಆಚಾರ್ಯ ಪರಂಪರೆಯ ಪೀಠಾಚಾರ್ಯರು ಹಿಂದೂ ಧರ್ಮ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದಾಗಲೇ ಭಾರತದ ಸನಾತನ ಧರ್ಮಸಂಸ್ಕೃತಿ ಉಳಿದು ಬೆಳೆದು ಬರಲು ಸಾಧ್ಯವಾಗುತ್ತದೆ ಎಂದರು. ಈ ವೇಳೆ ಮಾತನಾಡಿದ ಕಾಶೀ ಜಗದ್ಗುರುಗಳು, ಭಾರತದ ಆಧ್ಯಾತ್ಮಿಕ ಪರಂಪರೆಯ ಘನತೆ ವಿಶ್ವತೋಮುಖವಾಗಿ ಹರಡುವಲ್ಲಿ ರಾಷ್ಟ್ರದ ಆಚಾರ್ಯ ಪರಂಪರೆಯ ಚಿಂತನೆಗಳು ಪ್ರಮುಖವಾಗಿವೆ. ಭಾರತವು ಹಲವಾರು ಮತ-ಧರ್ಮಗಳ ಸಂಗಮವಾಗಿದ್ದು, ಎಲ್ಲಾ ಧರ್ಮಗಳ ಬೋಧನೆಯು ಸಾಕ್ಷಾತ್ಕಾರದ ದಾರಿಗೆ ದೀಪವಾಗಿದೆ ಎಂದರು.ಈ ಸಂದರ್ಭದಲ್ಲಿ ಬೆಂಗಳೂರು ವಿಭೂತಿಪುರಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ವಿರಕ್ತಮಠದ ಶ್ರೀ ಬಸವಜಯಚಂದ್ರ ಸ್ವಾಮೀಜಿ, ಮಂತ್ರಾಲಯ ಸಂಸ್ಥಾನದ ವ್ಯವಸ್ಥಾಪಕ ಸಮಿತಿಯ ಅಪ್ರಮೇಯ ಆಚಾರ್ಯ, ಪ್ರಕಾಶ, ಕಿಶೋರ, ರಾಜೇಶ ಶೆಟ್ಟಿ, ಶ್ರೀಕಾಶಿ ಜ್ಞಾನ ಪೀಠದ ವ್ಯವಸ್ಥಾಪಕ ಸಮಿತಿಯ ಶಿವಾನಂದ ಹಿರೇಮಠ, ಶಿವಮೂರ್ತಿ ಹಿರೇಮಠ ಮತ್ತಿತರರಿದ್ದರು.