ಹುಳಿಯಾರಿನಲ್ಲಿ Legislative Awareness ಶಾಸನ ಸಂಶೋಧಕರಾದ ಕೆ.ಸಿ.ಶಶಿಕುಮಾರ ನಾಯಕ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶಾಸನ ಜಾಗೃತಿ ಮತ್ತು ಮಾಹಿತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕ ನರೇಂದ್ರಬಾಬು, ಶಾರದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹೇಮಂತ್, ಶಿಕ್ಷಕರಾದ ವನಜಾ, ಶಹನಾಜ್, ಈಶ್ವರ ದೇವಸ್ಥಾನದ ಅರ್ಚಕ ವೀರೇಶ್, ಗಣಪತಿ ದೇವಸ್ಥಾನದ ಅಂಜನ್ ಕುಮಾರ್, ಮೌರ್ಯ ಇದ್ದರು.
- ಶಾಸನ ಸಂಶೋಧಕ ಕೆ.ಸಿ.ಶಶಿಕುಮಾರ ನಾಯಕ ಹೇಳಿಕೆ
- ವಿದ್ಯಾರ್ಥಿಗಳಿಗೆ ಮಾಹಿತಿ ಪತ್ರ ವಿತರಣೆ
ನಮ್ಮ ಸಂಸತಿ, ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಾಚಿನ ಶಾಸನಗಳ ಹಾಗೂ
ಐತಿಹಾಸಿಕ ಪಾರಂಪರಿಕ ಕುರುಹುಗಳ ಕುರಿತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಸನ ಸಂಶೋಧಕ ಕೆ.ಸಿ.ಶಶಿಕುಮಾರ ನಾಯಕ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಶಾಸನ ಜಾಗೃತಿ ಮತ್ತು ಮಾಹಿತಿ ಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈಶ್ವರನ ಗುಡಿ ಮುಂಭಾಗದಲ್ಲಿರುವ ವೀರಗಲ್ಲಿನ ಬಗ್ಗೆ ಸಂಶೋಧಕ ಕೆ.ಸಿ.ಶಶಿಕುಮಾರ ವಿವರಿಸಿ, ಈ ವೀರಗಲ್ಲು ಸುಮಾರು 12ರಿಂದ 13ನೇ ಶತಮಾನಕ್ಕೆ ಅಂದರೆ 800 ವರ್ಷಗಳಷ್ಟು ಹಳೆಯ ಇತಿಹಾಸಕ್ಕೆ ಸೇರಿದ್ದಾಗಿದೆ. ಶಾಸನಗಳು ಇಲ್ಲದಿರುವ ಇಂತಹ ವೀರಗಲ್ಲುಗಳಲ್ಲಿನ ಶಿಲ್ಪಕಲೆಯ ಆಧಾರದ ಮೇಲೆಯೇ ಇತಿಹಾಸ ತಿಳಿದುಕೊಳ್ಳಬೇಕಾಗುತ್ತದೆ ಎಂದರು.
ಸಾಮಾನ್ಯವಾಗಿ ವೀರಗಲ್ಲುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಕೆಳಗಿನ ಹಂತದಲ್ಲಿ ಯುದ್ಧ ಮತ್ತು ಹೋರಾಟದ ದೃಶ್ಯವನ್ನು ಕೆತ್ತಲಾಗುತ್ತದೆ. ಈ ವೀರಗಲ್ಲಿನಲ್ಲಿ ವೀರನು ಹಸುಗಳನ್ನು ಕಳ್ಳರಿಂದ ಅಥವಾ ಶತ್ರುಗಳಿಂದ ರಕ್ಷಿಸಲು ನಡೆಸಿದ ಯುದ್ಧದ ದೃಶ್ಯವಿದೆ. ಇದನ್ನು 'ತುರುಗೋಳು ವೀರಗಲ್ಲು' (ತುರು ಎಂದರೆ ಹಸು) ಎನ್ನಲಾಗುತ್ತದೆ. ಆ ಕಾಲದಲ್ಲಿ ಗೋವು ನಾಡಿನ ಪ್ರಮುಖ ಸಂಪತ್ತಾಗಿದ್ದು, ಅದನ್ನು ಕಾಯಲು ವೀರನು ಹೋರಾಡಿ ವೀರಮರಣ ಅಪ್ಪಿದ್ದಾನೆ ಎಂದರು.
ಮಧ್ಯದ ಹಂತದಲ್ಲಿ ಸ್ವರ್ಗಾರೋಹಣ ಚಿತ್ರವನ್ನು ಕೆತ್ತಲಾಗುತ್ತದೆ. ಯುದ್ಧದಲ್ಲಿ ವೀರಮರಣ ಹೊಂದಿದ ವೀರನನ್ನು ಅಪ್ಸರೆಯರು/ದೇವಕನ್ಯೆಯರು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಗೌರವಪೂರ್ವಕವಾಗಿ ದೇವಲೋಕಕ್ಕೆ (ಸ್ವರ್ಗಕ್ಕೆ) ಕರೆದೊಯ್ಯುವ ವೈಭವೋಪೇತ ದೃಶ್ಯವನ್ನು ಕಾಣಬಹು. ಮೇಲಿನ ಹಂತದಲ್ಲಿ ಕೈಲಾಸ/ಶಿವಸಾನಿಧ್ಯ ತಲುಪಿರುವ ಬಗ್ಗೆ ಕೆತ್ತಲಾಗುತ್ತದೆ. ಈ ವೀರಗಲ್ಲಿನಲ್ಲಿ ಮೇಲ್ಭಾಗದಲ್ಲಿ ವೀರನು ಕೈ ಮುಗಿದು ಕುಳಿತಿದ್ದು, ಅವನ ಎದುರಿಗೆ ಶಿವಲಿಂಗ, ಶಿವಲಿಂಗಕ್ಕೆ ಪೂಜೆ ಮಾಡುತ್ತಿರುವ ಯತಿ/ಪೂಜಾರಿ ಹಾಗೂ ನಂದಿಯ ಶಿಲ್ಪವಿದೆ. ವೀರನು ಕೈಲಾಸ ತಲುಪಿ ಶಿವನ ಸಾನ್ನಿಧ್ಯವನ್ನು ಪಡೆದಿದ್ದಾನೆ ಎಂಬುದನ್ನು ಇದು ಸಂಕೇತಿಸುತ್ತದೆ ಎಂದು ವಿವರಿಸಿದರು.
ಯುದ್ಧದಲ್ಲಿ ಗೆದ್ದರೆ ರಾಜ್ಯಲಕ್ಷಿ$್ಮ ದೊರೆಯುತ್ತದೆ, ಮರಣ ಹೊಂದಿದರೆ ದೇವಕನ್ಯೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ ಎಂಬ ವಾಕ್ಯವನ್ನು ಉಲ್ಲೇಖಿಸಿದರು. ಈ ರೀತಿಯ ಹೋರಾಟದ ಮನೋಭಾವ ಮತ್ತು ತ್ಯಾಗವು ಹಿಂದಿನ ಕಾಲದಲ್ಲಿ ದೇಶಪ್ರೇಮ ಹಾಗೂ ಊರಿನ ರಕ್ಷಣೆಗೆ ಪ್ರೇರಣೆಯಾಗಿತ್ತು. ನಮ್ಮ ಸುತ್ತಮುತ್ತಲಿರುವ ಇಂತಹ ವೀರಗಲ್ಲುಗಳನ್ನು ಕೇವಲ ಕಲ್ಲುಗಳೆಂದು ರ್ನಿಲಕ್ಷಿಸದೆ, ಅವುಗಳ ಹಿಂದಿರುವ ಕಥೆ, ಇತಿಹಾಸ ಮತ್ತು ಸಂಸತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.