eshwar kandre 
ರಾಜ್ಯ

ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ; 8 ವಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗಧಿ: ಸಚಿವ ಈಶ್ವರ ಖಂಡ್ರೆ

ಪ್ರಮುಖ ಮುಖ್ಯಾಂಶಗಳು

  • ಇಲಾಖೆಯಲ್ಲಿ 25540 ಮಂಜೂರಾದ ಹುದ್ದೆಗಳಿವೆ; 4 ಸಾವಿರ ಹುದ್ದೆ ಭರ್ತಿಗೆ ಕ್ರಮ
  • ಯಾವುದೇ ಕಾರಣಕ್ಕೂ ಕಲುಷಿತ ನೀರು ಸರಬರಾಜಾಗದಂತೆ ಎಚ್ಚರ ವಹಿಸಿ
  • ಇ-ಸ್ವತ್ತು ಸರ್ವರ್ ಸಮಸ್ಯೆಗೂ ಸ್ಪಂಧನೆ
ಬೆಂಗಳೂರು:
ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ನಿಗಧಿ ಮಾಡಿ ಶೀಘ್ರವೇ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ಈಶ್ವರ ಖಂಡ್ರೆ ಹೇಳಿದ್ದಾರೆ.
ಹೊಸ ಖಾತೆಯ ಜವಬ್ದಾರಿ ತೆಗೆದುಕೊಂಡ ಬಳಿಕ ಮೊದಲ ಬಾರಿಗೆ ಇಲಾಖಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 8 ವಾರಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ನಂತರ ರಾಜ್ಯ ಚುನಾವಣೆ ಆಯೋಗ ಚುನಾವಣೆ ಪ್ರಕ್ರಿಯೆ ನಡೆಸಲಿದೆ ಎಂದರು.
ಕ್ಷೇತ್ರ ಮರು ವಿಂಗಡಣೆಯೂ ಬಹುಪಾಲು ಮುಗಿದಿದೆ. ಹೊಸದಾಗಿ ತಾಲೂಕು ರಚನೆಯಾದ ಬಾಗಲಕೋಟೆ, ಬೀದರ್, ಹಾವೇರಿ, ಚಿತ್ರದುರ್ಗ, ಕಲಬುರ್ಗಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಾತ್ರವೇ ಕ್ಷೇತ್ರ ವಿಂಗಡಣೆ ಕೆಲಸ ಆಗಬೇಕಾಗಿದೆ ಎಂದು ಮಾಹಿತಿ ನೀಡಿದರು.
4 ಸಾವಿರ ಹುದ್ದೆ ಭರ್ತಿಗೆ ಕ್ರಮ:
ಇಲಾಖೆಯಲ್ಲಿ 25540 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ 8770 ಹುದ್ದೆ ಖಾಲಿ ಇವೆ.
ಎ ವರ್ಗದ 268, ಬಿ ವರ್ಗದ 1079, ಸಿ ವರ್ಗದ 5294, ಡಿ ವರ್ಗದ 2129 ಹುದ್ದೆಗಳು ಸೇರಿವೆ.
ಈ ಪೈಕಿ ಎಲ್ಲ ವರ್ಗದ ಹುದ್ದೆಗಳ ಪೈಕಿ 4 ಸಾವಿರ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಎಲ್ಲ ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ಸಮ್ಮತಿ ಸೂಚಿಸಿದ್ದು, 1400 ಹುದ್ದೆಗಳ ಭರ್ತಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಅನುಮತಿ ನೀಡಲಾಗಿದೆ ಎಂದರು.
ಕುಲಶಿತ ನೀರಿನ ಬಗ್ಗೆ ಎಚ್ಚರ ವಹಿಸಿ:
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಯಾವುದೇ ಕಾರಣಕ್ಕೂ ಕಲುಷಿತ ನೀರು ಸರಬರಾಜಾಗದಂತೆ ಎಚ್ಚರ ವಹಿಸಿ ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ. ನೀರಿನ ಪರೀಕ್ಷೆಯನ್ನು ಎನ್.ಎ.ಬಿ.ಎಲ್. ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ನಿಯಮಿತವಾಗಿ ಮಾಡುವಂತೆ ಆದೇಶಿಸಿರುವುದಾಗಿ ತಿಳಿಸಿದರು.
ಎಂದು ಸಚಿವ ಖಂಡ್ರೆ ಹೇಳಿದರು.
ಮೇಲ್ಮೈ ನೀರಿನಿಂದ ಮುಂದಿನ 30 ವರ್ಷಗಳ ಕಾಲ ನೀರು ಪೂರೈಸಲು ಕ್ರಮ ವಹಿಸಲಾಗಿದೆ. ಹೀಗಾಗಿ ನದಿ, ಕೆರೆ, ಸರೋವರ ಸೇರಿದಂತೆ ಯಾವುದೇ ಜಲಮೂಲ ಕಲುಷಿತವಾಗದಂತೆ ಸೂಚಿಸಲಾಗಿದೆ. ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆ ಒತ್ತುವರಿ ತೆರವು ಗೊಳಿಸಲು ಕ್ರಮ ವಹಿಸುವಂತೆ ಮತ್ತು ಜಲ ಮೂಲಗಳಿಗೆ ನೇರವಾಗಿ ಮಲತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇ-ಸ್ವತ್ತು ಸರ್ವರ್ ಸಮಸ್ಯೆಗೂ ಸ್ಪಂಧನೆ:
ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದವರಿಗೆ ಖಾತಾ ವಿಳಂಬವಾಗುತ್ತಿದೆ. ಸರ್ವರ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.
ಜಲಜೀವನ ಯೋಜನೆಗೆ
ಕೇಂದ್ರದಿಂದ 894 ಕೋಟಿ

ಜಲಜೀವನ ಯೋಜನೆಯಲ್ಲಿ ಕೇಂದ್ರದಿಂದ ಕಳೆದ ವರ್ಷ ಅನುದಾನ ಬಂದಿರಲಿಲ್ಲ. ಈ ವರ್ಷ894 ಕೋಟಿ ರೂ ಅನುದಾನ ಬಂದಿದೆ. ಇನ್ನು 14 ಲಕ್ಷ ಮನೆಗಳಿಗೆ ಸಂಪರ್ಕ ಬಾಕಿ ಇದೆ. ಎಲ್ಲಾ ಮನೆಗಳಿಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡಲಾಗುವುದು. ಈ ನಿಟ್ಟಿನಲ್ಲಿಯೂ ಸೂಚನೆ ನೀಡಲಾಗಿದೆ -ಸಚಿವ ಈಶ್ವರ ಖಂಡ್ರೆ

ಇಲಾಖೆ ಸೃಜಿಸಿರುವ ಆಸ್ತಿಯ ಜಿಯೋ ಟ್ಯಾಗ್ ಗೆ ಸೂಚನೆ:
ಸುದ್ದಿಗೋಷ್ಠಿಗೂ ಮೊದಲು ನಡೆದ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಸೃಜಿಸಲಾಗಿರುವ ಎಲ್ಲ ಆಸ್ತಿಗಳ ದಾಖಲೀಕರಣ ಆಗಬೇಕು. ಈ ಎಲ್ಲ ಆಸ್ತಿಗಳೂ ಗುಣಮಟ್ಟದಿಂದ ಕೂಡಿರಬೇಕು, ಇದರಲ್ಲಿ ಯಾವುದೇ ರಾಜೀಗೆ ಅವಕಾಶವಿಲ್ಲ. ಜೊತೆಗೆ ಎಲ್ಲ ಅಸ್ತಿಯನ್ನು ಜಿಯೋ ಟ್ಯಾಗ್ ಮಾಡಿ ಸರ್ಕಾರಿ ಆಸ್ತಿ ಸಂರಕ್ಷಣೆ ಮಾಡಿ, ಅದನ್ನು ಅಪ್ ಲೋಡ್ ಮಾಡುವಂತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಅರಣ್ಯೀಕರಣ ಆಡಿಟ್ ಗೆ ಸೂಚನೆ:
ಮನ್ರೇಗಾ ಸಂಯೋಜನೆಯಲ್ಲಿ ಸಾಮಾಜಿಕ ಅರಣ್ಯಕ್ಕೆ ಆರ್ಥಿಕ ನೆರವು ಒದಗಿಸಲಾಗಿದ್ದು, ರಸ್ತೆ ಬದಿಯಲ್ಲಿ ಮತ್ತು ನೆಡುತೋಪುಗಳಲ್ಲಿ ಬೆಳೆಸಲಾಗಿರುವ ಸಸಿಗಳ ಜಿಯೋ ಟ್ಯಾಗ್ ಮಾಡಿ, ಆಡಿಟ್ ಮಾಡಿಸಲು ಈಶ್ವರ ಖಂಡ್ರೆ ಸೂಚಿಸಿದರು.
ಹಳ್ಳಿ ರಸ್ತೆ ಸಂಪರ್ಕ ಕಲ್ಪಿಸಲು ಆದೇಶ:
ರಾಜ್ಯದಲ್ಲಿ 2 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆ ಇದ್ದು, ಇದರಲ್ಲಿ ಎಷ್ಟು ಮಣ್ಣಿನ ರಸ್ತೆ ಇದೆ. ಎಷ್ಟು ಕಾಂಕ್ರೀಟ್ ರಸ್ತೆ ಇದೆ, ಎಷ್ಟು ಡಾಂಬರು ರಸ್ತೆ ಇದೆ ಎಂಬ ಸಂಪೂರ್ಣ ವಿವರ ನೀಡುವಂತೆ ತಿಳಿಸಿದ ಸಚಿವರು, ಬಸ್ ಸಂಪರ್ಕವೇ ಇಲ್ಲದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕನಿಷ್ಠ ಒಂದು ಸಂಪರ್ಕ ರಸ್ತೆ ಕಲ್ಪಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ರಂದೀಪ್ ಡಿ, ಪಂಚಾಯತ್ ರಾಜ್ ಆಯುಕ್ತರಾದ ಡಾ ಅರುಂಧತಿ, ಕೆಆರ್‌ಐಡಿಎಲ್ ಎಂಡಿ ರಾಜೇಶ್ ಗೌಡ, ಕುಡಿಯುವ ನೀರು ಪೂರೈಕೆ ವಿಭಾಗದ ಆಯುಕ್ತರಾದ ಫೌಜಿಯಾ ತರುನ್ನುಂ ಮತ್ತಿತರರು ಪಾಲ್ಗೊಂಡಿದ್ದರು.
ಖಾತೆ ತೃಪ್ತಿ ತಂದಿದೆ
ನನಗೆ ನೀಡಿರುವ ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ತೃಪ್ತಿ ಇದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಈ ಹಿಂದೆಯೂ ಅರಣ್ಯ ಇಲಾಖೆ ಖಾತೆಯನ್ನು ಕ್ರೀಯಾಶೀಲವಾಗಿ ನಿರ್ವಹಣೆ ಮಾಡಿದ ತೃಪ್ತಿ ಇದೆ. ಪಕ್ಷದ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳು, ಮಾಜಿ ಸಿಎಂ ಸೇರಿದಂತೆ ಎಲ್ಲರೂ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುವೆ ಎಂದರು.