ಬಾಗಲಕೋಟೆ ಜಿಲ್ಲೆಯಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಜಿ.ಮನ್ನಿಕೇರಿ ನೇತೃತ್ವದಲ್ಲಿ ಶಿಕ್ಷಕರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವುದು. 
ರಾಜ್ಯ

ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಜಿ.ಮನ್ನಿಕೇರಿ ಮಾಹಿತಿ
  • ಮನೆ ಮನೆಗೆ ತೆರಳಿ ಜಾಗೃತಿ
ಬಾಗಲಕೋಟೆ: ಹೊಸ ಶೈಕ್ಷಣಿಕ ವರ್ಷದ ಆರಂಭದ ಹಿನ್ನೆಲೆಯಲ್ಲಿ ಜೂನ್ 1ರಿಂದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ಶಾಲಾ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಜಿ.ಮನ್ನಿಕೇರಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಜಿಲ್ಲಾಧಿಕಾರಿ ಸಂಗಪ್ಪ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೋಷಕರ ಸಹಭಾಗಿತ್ವದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲು ವಿಶೇಷ ಸಿದ್ಧತೆ ಕೈಗೊಳ್ಳುತ್ತಿದೆ. ಶಾಲಾ ಆವರಣವನ್ನು ತೋರಣ, ಬಲೂನ್ ಹಾಗೂ ಬಣ್ಣ ಬಣ್ಣದ ಅಲಂಕಾರಗಳಿಂದ ಸಿಂಗರಿಸಲಾಗುತ್ತಿದ್ದು, ಮಕ್ಕಳಲ್ಲಿ ಶಾಲೆಯ ಬಗ್ಗೆ ಉತ್ಸಾಹ ಮೂಡಿಸುವ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಉಚಿತ ಪಠ್ಯಪುಸ್ತಕ, ಉತ್ತಮ ಗುಣಮಟ್ಟದ ಶೂ ಹಾಗೂ ಸಾಕ್ಸ್‌ಗಳನ್ನು ನೀಡಲಾಗುತ್ತಿದೆ. ಈ ವರ್ಷದಿಂದ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷೆ ಕಲಿಕೆ ಪ್ರಾರಂಭಿಸಲಾಗುತ್ತಿದೆ. ಪ್ರತಿಷ್ಠಿತ ಕೆಜಿಎಸ್, ಪಿಎಂಶ್ರೀ, ಆದರ್ಶ ವಿದ್ಯಾಲಯ ಹಾಗೂ ಕೆಜಿಬಿವಿಗಳಂತಹ ಮಾದರಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುತ್ತಿದೆ. ರಾಗಿ ಮಾಲ್ಟ, ಸಕ್ಕರೆ ಮಿಶ್ರಿತ ಹಾಲು, ರುಚಿ ಕಟ್ಟಾದ ಮಧ್ಯಾಹ್ನ ದ ಬಿಸಿಊಟ, ಮೊಟ್ಟೆ, ಬಾಳೆಹಣ್ಣುಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವ ಪಾಲಕರಿಗೆ ಆರ್ಥಿಕ ಹೊರೆ ಇರುವುದಿಲ್ಲ. ಜೊತೆಗೆ ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ ಕ್ಲಾಸ್‌ಗಳ ಲಭ್ಯತೆಯಿಂದ ಕಲಿಕೆ ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ.
ಈ ವರ್ಷದಿಂದ ಮೌಲ್ಯ ಶಿಕ್ಷಣದ ಪಠ್ಯಪುಸ್ತಕಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಕಲಿಸುವ ಕೆಲಸ ಮಾಡಲಾಗುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಹೀಗಾಗಿ ಪಾಲಕರು ಅಥವಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಶಿಕ್ಷಕರ ತಂಡವೂ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
"

ಸರ್ಕಾರಿ ಶಾಲೆಗಳಲ್ಲಿ ಸಮಾಜಿಕ ಸಮಾನತೆಯನ್ನು ಸಾರಲಾಗುತ್ತಿದ್ದು, ಬೇಧ-ಭಾವವಿಲ್ಲದ, ಭಾತೃತ್ವದ ನೆಲೆಗಟ್ಟಿನ ಶಿಕ್ಷಣ ನೀಡಿ ಮಾನವೀಯ ಮೌಲ್ಯಗಳನ್ನು ರೂಢಿಸಲಾಗುತ್ತಿದೆ. ಸರಳ ಬದುಕು, ಉನ್ನತ ಚಿಂತನೆಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಸಾಕಾರ ಮಾಡಲಾಗುತ್ತಿದೆ. ಗ್ರಾಮೀಣ, ನಗರ ಭಾಗಗಳಲ್ಲಿ ಸರ್ವರಿಗೂ ಶಿಕ್ಷಣವನ್ನು ನೀಡಿ ಸಾಮಾಜಿಕ ಒಗ್ಗಟ್ಟನ್ನು ಮೂಡಿಸಲಾಗುತ್ತಿದೆ.

ಎ.ಜಿ.ಮನ್ನಿಕೇರಿ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಬಾಗಲಕೋಟೆ.