Prepare for competitive exams
ಹುಳಿಯಾರು: ವಿದ್ಯಾರ್ಥಿಗಳಿಗೆ ಕೇವಲ ಪದವಿ ಶಿಕ್ಷಣ ಅಷ್ಟೇ ಸಾಲದು, ಎಫ್ಡಿಎ, ಎಸ್ಡಿಎ ಬ್ಯಾಂಕಿಂಗ್ ಮತ್ತು ಪೊಲೀಸ್ ಉದ್ಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಇದಕ್ಕಾಗಿ ಈ ವರ್ಷದಿಂದ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಶ್ಚಾತ್ಯ ಸಂಸತಿಯ ಅತಿಯಾದ ವ್ಯಾಮೋಹದಿಂದಾಗಿ ಇಂದು ನಾವು ನಮ್ಮದೇ ಆದ ಗ್ರಾಮೀಣ ಸೊಗಡು ಹಾಗೂ ಶ್ರೀಮಂತ ಜಾನಪದ ಪರಂಪರೆಯನ್ನು ಮರೆಯುತ್ತಿದ್ದೇವೆ. ನಮ್ಮ ದೇಶದ ಯೋಗ, ಸಾಂಪ್ರದಾಯಿಕ ಸೀರೆ ಮತ್ತು ಪಂಚೆ ಶೈಲಿಯ ಉಡುಗೆಗಳು ಇಡೀ ಜಗತ್ತನ್ನೇ ಆಕರ್ಷಿಸುತ್ತಿವೆ. ವಿದೇಶಿಗರು ನಮ್ಮ ಸಂಸತಿಯನ್ನು ಗೌರವಿಸಿ ಅಳವಡಿಸಿಕೊಳ್ಳುತ್ತಿದ್ದರೆ, ನಾವು ಮಾತ್ರ ನಮ್ಮದೇ ಆದ ಅಸ್ಮಿತೆಯನ್ನು ಬಿಟ್ಟು ಗೊಂದಲಕ್ಕೀಡಾಗುತ್ತಿದ್ದೇವೆ ಎಂದರು.
ಈ ಆಧುನಿಕ ಯುಗದಲ್ಲಿ ನಾವು ತಂತ್ರಜ್ಞಾನದೊಂದಿಗೆ ವೇಗವಾಗಿ ಮುನ್ನಡೆಯಬೇಕಿದ್ದರೂ, ನಮ್ಮ ಪರಂಪರೆ, ಕೃಷಿ ಚಟುವಟಿಕೆಗಳು ಮತ್ತು ಜಾನಪದ ಕಲೆಗಳನ್ನು ಎಂದಿಗೂ ಮರೆಯಬಾರದು ಎಂದರು
ಪ್ರಾಂಶುಪಾಲ ಪ್ರೊ.ವೀರಣ್ಣ ಅವರು ಮಾತನಾಡಿ, ಕಳೆದ ವರ್ಷ ಕಾಲೇಜು ಶಿಕ್ಷಣ ಇಲಾಖೆಯ ಆದೇಶದನ್ವಯ ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು, ಆದರೆ ಈ ಬಾರಿ ಯಾವುದೇ ಇಲಾಖೆಯ ಅಧಿಕೃತ ಆದೇಶವಿಲ್ಲದಿದ್ದರೂ ವಿದ್ಯಾರ್ಥಿಗಳೇ ಸ್ವತ@ ಮುಂಚೂಣಿ ನಿಂತು, ತಮ್ಮ ಸ್ವಂತ ಖರ್ಚು-ವೆಚ್ಚಗಳನ್ನು ಭರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ಕಾಲೇಜಿನ ಇತಿಹಾಸದಲ್ಲೇ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಕಾಲೇಜಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರೇಂರ್ಜಸ್ ಆ್ಯಂಡ್ ರೋವರ್ಸ್ ಘಟಕದಿಂದ ಹಾಗೂ ಐಕ್ಯೂಎಸಿ, ಕ್ರೀಡಾ ನಿರ್ದೇಶಕರ ಸಹಕಾರದೊಂದಿಗೆ ಬರುವ ಶುಕ್ರವಾರದಿಂದ ಕಾಲೇಜು ಆವರಣದಲ್ಲಿ ಬಿ.ಎಂ.ಎಸ್ ದಾಸೋಹ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅನ್ನದಾನ ಮಾಡುವ ಸತ್ಕಾರ್ಯಕ್ಕೆ ಕಾಲೇಜು ಮುಂದಾಗಲಿದೆ ಎಂದರು.