ಹೊಸಕೋಟೆ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರಡು ಅಭಿವೃದ್ಧಿ ಯೋಜನೆ ಪರಿಶೀಲಾನಾ ಸಭೆಯಲ್ಲಿ ಶಾಸಕ ಶರತ್ ಬಚ್ಚೆಗೌಡ ಮಾತನಾಡಿದರು. ತಾಪಂ ಇಒ ಮುನಿಯಪ್ಪ, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಪಿಡಿಒಗಳು ಇದ್ದರು.
ಹೊಸಕೋಟೆ : ಮುಂದಿನ ಎರಡು ವರ್ಷಗಳಲ್ಲಿ ನಗರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಮೂಲಸೌಕರ್ಯಕ್ಕೆ ಕರಡು ಅಭಿವೃದ್ಧಿ ಯೋಜನೆಯಡಿ ಬೇಡಿಕೆ ಪಟ್ಟಿ ಸಿದ್ಧಪಡಿಸಬೇಡಿ, ಕನಿಷ್ಠ ಐದು ವರ್ಷಕ್ಕೂ ಮೀರಿ ಬೇಕಾದ ಅವಶ್ಯಕತೆಗಳನ್ನು ಹುಡುಕಿ ಕರಡು ಪ್ರತಿ ಸಿದ್ಧಗೊಳಿಸಿ ಸರ್ಕಾರಕ್ಕೆ ನೀಡಿ ಎಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಜತೆ ಕರಡು ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಹೊಸಕೊಟೆ ತಾಲೂಕು ವೇಗವಾಗಿ ಬೆಳೆಯುತ್ತಿದ್ದು, ತಾಲೂಕನ್ನು ಮಾದರಿಯನ್ನಾಗಿ ಮಾಡುವ ಆಶಯವಿದೆ. ಕೇವಲ ನೀರು, ಮೋರಿ, ರಸ್ತೆ, ಬೀದಿ ದೀಪಗಳು ಮಾತ್ರ ಸಾರ್ವಜನಿಕ ಮೂಲ ಸೌಕರ್ಯಗಳಲ್ಲ. ಇದರ ಜತೆಗೆ ಕುಸುಮ್ ಯೋಜನೆಯಡಿ ಸೋಲಾರ್ ಅಳವಡಿಸಿ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ& ಕಾಲೇಜುಗಳು, ಸರ್ಕಾರಿ ಗೋಮಾಳ, ಕೆರೆಯಂಗಳದಲ್ಲಿ ಸೋಲಾರ್ ಉತ್ಪಾದಿಸಿ ವಿದ್ಯುತ್ ಬಳಕೆ, ಮಳೆ ನೀರಿನ ಕೊಯ್ಲು, ನಗರದ ವ್ಯಾಪ್ತಿಯಲ್ಲಿ 24 ಗಂಟೆ ವಿದ್ಯುತ್, ನೀರು ಸರಬರಾಜಿಗೆ ಕಾವೇರಿ ನೀರು, ನೂತನ ಉದ್ಯಾನವನಗಳ ನಿರ್ಮಾಣ, ಬೀದಿ ದೀಪ ನಿರ್ವಹಣೆ, ನೈರ್ಮಲ್ಯ ಕಾಪಾಡಲು, ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಅಲ್ಲದೇ ಗ್ರಾಮಗಳಿಗೆ ಉತ್ತಮ ಸಾರಿಗೆ ನೀಡುವ ನಿಟ್ಟಿನಲ್ಲಿ ಈಗಾಗಲೆ ಎರಡು ಎಲೆಕ್ಟ್ರಿಕ್ ಬಸ್ ಡಿಪೋ ಸ್ಥಾಪನೆಗೆ ಸರ್ಕಾರ ಮಂಜೂರು ಮಾಡಿದ್ದು, ನಂದಗುಡಿ ಹಾಗೂ ಅನುಗೊಂಡನಹಳ್ಳಿ ಭಾಗದಲ್ಲಿ ಒಂದು ಟಕ ಸ್ಥಾಪನೆಗೆ ಕನಿಷ್ಠ ಐದು ಎಕರೆ ಸರ್ಕಾರಿ ಜಾಗದ ಅವಶ್ಯಕತೆಯಿದೆ. ಕಂದಾಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ, ರಾಸುಗಳ ಾಮ್ರ್ ಸ್ಥಾಪನೆ, ಬ್ರೀಡಿಂಗ್ ಕೇಂದ್ರಗಳ ಬೇಡಿಕೆ, ಕೇವಲ ಶಾಲಾ ಕಟ್ಟಡ ದುರಸ್ತಿ ಮಾತ್ರವಲ್ಲದೆ ಮ್ಯಾಗ್ನೆಟ್ ಶಾಲೆ ಸ್ಥಾಪನೆಗೆ ಬೇಕಾದ ಕೆಪಿಎಸ್ ಮಾನದಂಡ ಅಳವಡಿಕೆಗೆ ಸಂಪನ್ಮೂಲ ಕ್ರೋಡಿಕರಣ, ಪ್ರಜಾ ಸೌಧ, ನಾಡಕಚೇರಿಗಳ ನಿರ್ಮಾಣ, ಹೀಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮುಂದಿನ 5 ವರ್ಷಕ್ಕೂ ಮೀರಿ ತಾಲೂಕಿಗೆ ಬೇಕಾಗುವ ಸೌಲಭ್ಯಗಳನ್ನು ಪ್ರತಿ ಗ್ರಾಪಂ ಅಭಿವೃದ್ಧಿ ಅಧಿಕಾರಿಯಿಂದ ಎಲ್ಲ ಸರ್ಕಾರಿ ಅಧಿಕಾರಿಗಳು ಕರಡು ಪ್ರತಿಯನ್ನು ತಯಾರಿಸಿ ಮುಂದಿನ ಸೋಮವಾರದೊಳಗೆ ಸಲ್ಲಿಸಬೇಕಿದೆ ಎಂದು ಸೂಚಿಸಿದರು.
ತಾಲೂಕಿನ ಅಭಿವೃದ್ಧಿಗೆ ಸದ್ಯ ಮೂರು ಸಾವಿರ ಕೋಟಿ ಬೇಡಿಕೆ ಇದೆ. ಈ ಸಂಬಂಧ ಕರಡು ಪ್ರತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದಲ್ಲಿ ಸರ್ಕಾರದ ಬಳಿ ಹೊಸಕೋಟೆ ತಾಲೂಕಿಗೆ ನೀಡಬೇಕಾದ ಸೌಕರ್ಯಗಳ ಪಟ್ಟಿ ಇರುತ್ತದೆ. ಈ ಸಮಯ ಸಂದರ್ಭದ ಆದಾರದಲ್ಲಿ ಬೇಡಿಕೆ ಈಡೇರಲು ಸಹಕಾರಿಯಾಗಲಿದೆ.