ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನೋವು ಉಪಶಮನ ಆರೈಕೆ ಕೇಂದ್ರ
- ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
- ನೋವು ಉಪಶಮನ ಆರೈಕೆ ಕೇಂದ್ರ
- ಒಂದು ಕೋಟಿ ರೂ. ವೆಚ್ಚದಲ್ಲಿ ಹಾಸ್ಪೈಸ್ ಸೆಂಟರ್
ಬೆಂಗಳೂರು: ಕ್ಯಾನ್ಸರ್ ಕಾಯಿಲೆಯಿಂದ ಸಾವಿನಂಚಿನಲ್ಲಿರುವ ರೋಗಿಗಳಿಗೆ ಉತ್ತಮ ಆರೈಕೆ ಒದಗಿಸುವುದರ ಜತೆಗೆ ನೋವು ಮತ್ತು ಒತ್ತಡ ರಹಿತವಾಗಿವಾಗಿ ಅಂತಿಮ ದಿನಗಳನ್ನು ಘನತೆಯಿಂದ ಕಳೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ನೋವು ಉಪಶಮನ ಆರೈಕೆ ಕೇಂದ್ರ (ಹಾಸ್ಪೈಸ್) ಪ್ರಾರಂಭಿಸಲು ಸಿದ್ಧತೆ ನಡೆಸಿದೆ.
ಈ ನಿಟ್ಟಿನಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ಥಿನ ಹಾಸ್ಪೈಸ್ ಸೆಂಟರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಖಾಸಗಿ ಸಂಸ್ಥೆಯೊಂದು ಕಟ್ಟಡ ನಿರ್ಮಿಸಿಕೊಡಲು ಮುಂದೆ ಬಂದಿದ್ದು, ಈಗಾಗಲೇ ಆಸ್ಪತ್ರೆ ಆವರಣದಲ್ಲಿ ಸ್ಥಳ ಗುರುತಿಸಲಾಗಿದೆ. ಹಾಸ್ಪಿಸ್ ಸೆಂಟರ್ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಸಹ ದೊರೆತಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಸಂಸ್ಥೆಯಲ್ಲಿ ಈಗಾಗಲೇ ಲಭ್ಯವಿರುವ ಪ್ಯಾಲಿಯೇಟಿವ್ ಆರೈಕೆಯ ಗುಣಮಟ್ಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಹಾಸ್ಪೈಸ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿದೆ. ಕ್ಯಾನ್ಸರ್ ನಿಂದ ಬಳಲುವ ರೋಗಿಗಳ ಜೀವನದ ಅಂತ್ಯಕಾಲದಲ್ಲಿ ಅನುಭವಿಸುವ ನೋವು, ಯಾತನೆ, ಅಶಾಂತಿ ಮತ್ತು ಭಾವನಾತ್ಮಕ ಅಸ್ಥಿರತೆಯನ್ನು ಕಡಿಮೆ ಮಾಡುವಲ್ಲಿ ಹಾಸ್ಪೈಸ್ ಸೆಂಟರ್ ಮಹತ್ವದ ಪಾತ್ರ ವಹಿಸಲಿದೆ. ಇದು ರೋಗಿಗೆ ಆರೈಕೆ ನೀಡುವುದರ ಜತೆಗೆ ಅವರ ಕುಟುಂಬದವರಿಗೂ ಮಾನಸಿಕ ನೆಮ್ಮದಿ ಒದಗಿಸಲಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಡಾ. ಟಿ. ನವೀನ್ ತಿಳಿಸಿದ್ದಾರೆ.
ಕಟ್ಟಡದ ವಿಶೇಷತೆ:
ಇದು ಮೂರು ಅಂತಸ್ತಿನ ಕಟ್ಟಡವಾಗಿದ್ದು, ನೆಲ ಮಹಡಿ ಹಾಗೂ ಮೊದಲ ಮಹಡಿಯಲ್ಲಿ ರೋಗಿಗಳಿಗೆ ಆರೈಕೆ ಒದಗಿಸಲು ವಾರ್ಡ್‌ಗಳನ್ನು ನಿರ್ಮಿಸಲಾಗುವುದು. ಮೂರನೇ ಮಹಡಿಯಲ್ಲಿ ರೋಗಿಗಳ ಕುಟುಂಬದ ಸದಸ್ಯರು ಹಾಗೂ ಸಿಬ್ಬಂದಿಗೆ ವ್ಯವಸ್ಥೆ ಕಲ್ಪಿಸಲು ಯೋಚಿಸಲಾಗಿದೆ. ನೀಲ ನಕ್ಷೆ ನಂತರ ಸಂಪೂರ್ಣ ಚಿತ್ರಣ ದೊರೆಯಲಿದೆ. ಈ ಕಟ್ಟಡದಲ್ಲಿ 50ಕ್ಕೂ ಅಧಿಕ ರೋಗಿಗಳಿಗೆ ನೋವು ಉಪಶಮನ ಆರೈಕೆ ಒದಗಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹಾಸ್ಪೈಸ್ ಸೆಂಟರ್:
ಹಾಸ್ಪೈಸ್ ಒಂದು ವಿಶೇಷ ರೀತಿಯ ವೈದ್ಯಕೀಯ ಆರೈಕೆಯಾಗಿದ್ದು, ಇದು ಜೀವನದ ಅಂತಿಮ ದಿನಗಳನ್ನು ಸಮೀಪಿಸುತ್ತಿರುವ ರೋಗಿಗೆ ಅವರ ಜೀವನದ ಗುಣಮಟ್ಟ ಮತ್ತು ಘನತೆಯನ್ನು ಕೇಂದ್ರೀಕರಿಸಿ ಸೇವೆ ಒದಗಿಸಲಿದೆ. ಸಾವು ಜೀವನದ ಅಂತಿಮ ಹಂತ ಮಾತ್ರ. ಹಾಗಾಗಿ ಜನರು ತಮ್ಮ ಪ್ರೀತಿಪಾತ್ರರಿಂದ ಸುತ್ತುವರೆದಿರುವ ಸಮಯಕ್ಕೆ ಸಾಧ್ಯವಾದಷ್ಟು ಸಂಪೂರ್ಣ ನೋವು ರಹಿತವಾಗಿ ಆರಾಮದಾಯಕವಾಗಿ ಕೊನೆಯುಸಿರೆಳೆಯಲು ಸಹಕರಿಸುವುದಾಗಿದೆ.
ಕೋಟ್ ಪ್ಯಾಲಿಯೇಟಿವ್ ಆರೈಕೆ ಸಾಮರ್ಥ್ಯವನ್ನು ಬಲಪಡಿಸಲು ಹಾಸ್ಪೈಸ್ ಕೇಂದ್ರ ನೆರವಾಗಲಿದೆ. ಹಾಗಾಗಿ ಸಿಎಸ್‌ಆರ್ ಅನುಧಾನದಲ್ಲಿ ಈ ಸೇವೆಯ ವಿಸ್ತರಣೆಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಈ ಕೇಂದ್ರ ಆರಂಭವಾದಲ್ಲಿ ರಾಜ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನೋವು ಉಪಶಮನ ಆರೈಕೆ ಚಿಕಿತ್ಸೆ ಒದಗಿಸುವ ರಾಜ್ಯದ ಮೊದಲ ಹಾಸ್ಪೈಸ್ ಸೆಂಟರ್ ಇದಾಗಿದೆ.
23-24 ಸಾವಿರ ಕ್ಯಾನ್ಸರ್ ರೋಗಿಗಳು:
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಿತ್ಯ 2,500-3000 ಹೊರ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. 650-750 ಒಳರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಪ್ರತಿ ವರ್ಷ ಹೊಸದಾಗಿ 23-24 ಸಾವಿರ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಇದಲ್ಲದೆ ಮೂರುವರೆ ಲಕ್ಷಕ್ಕೂ ಅಧಿಕ ಮಂದಿ ಫಾಲೋಅಪ್ ಚಿಕಿತ್ಸೆಗೆ ಬರುತ್ತಾರೆ. ಇವರಲ್ಲಿ ಒಟ್ಟಾರೆ ಶೇ. 20 ಮಂದಿಗೆ ಪ್ಯಾಲಿಯೇಟಿವ್ ಹಾಗೂ ಹಾಸ್ಪೈಸ್ ಕೇಂದ್ರದ ಅಗತ್ಯ ಬೀಳುತ್ತದೆ.