ಸಣಾಪುರ ಭಾಗದ ಜಮೀನಿನಲ್ಲಿ ಭತ್ತದ ಸಸಿ ಬೆಳೆದಿರುವುದು.  
ರಾಜ್ಯ

ಭತ್ತ ಬೆಳೆಯಲು ಈಗಿನಿಂದಲೇ ಸಿದ್ಧತೆ

JAGADEESH KUMBAR
ಕಂಪ್ಲಿ: ತುಂಗಭದ್ರಾ ನದಿ ತಟದ ಗ್ರಾಮಗಳಲ್ಲಿ ನದಿ ನೀರು ಮತ್ತು ಬೋರ್‌ವೆಲ್ ಆಧಾರಿತ ಕೃಷಿಕರು ಭತ್ತ ಸಸಿ ಮಡಿ ಹಾಕಿದ್ದು, ಭತ್ತದ ಬೆಳೆಗೆ ಈಗಿನಿಂದಲೇ ಸಿದ್ಧತೆ ಕೈಗೊಂಡಿದ್ದಾರೆ. 
ಬೆಳಗೋಡ್‌ಹಾಳ್, ಸಣಾಪುರ, ಇಟಗಿ, ಮಣ್ಣೂರು, ಸೂಗೂರು, ಇತರ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿವೆ.
 ಉತ್ತಮ ಮಳೆ ಬಂದಿರುವುದರಿಂದ ಟಿಲ್ಲರ್ ಹೊಡೆಯುವುದು, ಭೂಮಿ ಹದ ಮಾಡಿಕೊಳ್ಳುವುದು ಮತ್ತಿತರ ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. 
ಕಳೆದ ವರ್ಷ ಮಳೆ ಹೆಚ್ಚಾಗಿ ಸೋನಾ ಮಸೂರಿ ಇಳುವರಿ ಕುಂಠಿತಗೊಂಡಿದ್ದರಿಂದ ಈ ಸಲ ರೈತರು ಸೋನಾ ಮಸೂರಿ ಬಿತ್ತನೆಯತ್ತ ಚಿತ್ತ ಹರಿಸಿಲ್ಲ. 
ಕನಿಷ್ಟ 50ರಿಂದ 100 ಕೆಜಿ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರ ಅಥವಾ ಸಿಟಿ ಕಾಂಪೋಸ್ಟ್ ಗೊಬ್ಬರ ಹಾಕಿದಲ್ಲಿ  ಸಸಿಗಳ ಮೊಳಕೆ ಉತ್ತಮವಾಗಿರುತ್ತದೆ. ಬೀಜೋಪಚಾರದಿಂದ ಸಸಿಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಮುಂಗಾರು ಪೂರ್ವ ಮಳೆಯಾಗಿದ್ದು, ರಾಸಾಯನಿಕ ಗೊಬ್ಬರದ ಕೊರತೆ ಇರುವುದರಿಂದ ಹಸಿರೆಲೆ ಗೊಬ್ಬರ ಬೆಳೆಯುವಲ್ಲಿ ರೈತರು ಮುಂದಾಗಬೇಕಿದೆ ಎಂದು ಕೃಷಿ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.  
"

ಬೀಜೋಪಚಾರ ಮಾಡಿಯೇ ಸಸಿಮಡಿ ಹಾಕಿಕೊಳ್ಳಬೇಕು. ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರ ಬಳಕೆ ಮಾಡುವಲ್ಲಿ ರೈತರು ಜಾಗೃತಿ ಹೊಂದಬೇಕಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಭತ್ತದ ಗದ್ದೆಗಳಲ್ಲಿ ಹಸಿರೆಲೆ ಗೊಬ್ಬರ ಬೆಳೆದು, ಮಗ್ಗು ಹೊಡೆಯಬೇಕಿದೆ.

— ಡಾ.ಸಿ.ಎಂ.ಕಾಲ್ವಿಬಾವಿ ಬೇಸಾಯ ತಜ್ಞ, ಕೃಷಿ ವಿಸ್ತರಣಾ ಕೇಂದ್ರ, ಹೂವಿನ ಹಡಗಲಿ