ಬೇಲೂರಿನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಚನ್ನಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.
- ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ-ಧರ್ಮ ಜಾಗೃತಿ ಸಮಾರಂಭ
- ಸೆ.30 ಮತ್ತು ಅ.1
ಬೇಲೂರು: ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ-ಧರ್ಮ ಜಾಗೃತಿ ಸಮಾರಂಭವನ್ನು ಸೆ.30 ಮತ್ತು ಅ.1 ರಂದು ಬೇಲೂರಿನಲ್ಲಿ ಆಯೋಜಿಸಿದ್ದು, ಜಗದ್ಗುರುಗಳ ಪುರ ಪ್ರವೇಶಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಜಾಗೃತಿ ಸಮಾರಂಭ ಅಂಗವಾಗಿ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಪರಂಪರೆಯಲ್ಲಿ ಪಂಚ ಪೀಠಗಳಿಗೆ ಮಹತ್ವದ ಸ್ಥಾನವಿದೆ. ಧರ್ಮ ಜಾಗೃತಿ, ಸಮಾಜದ ಸಂಘಟನೆಗೆ ನಿರಂತರ ಕೊಡುಗೆ ನೀಡುತ್ತಿವೆ. ಇದೀಗ ಉಜ್ಜಯಿನಿ ಜಗದ್ಗುರುಗಳನ್ನು ಪ್ರಥಮ ಬಾರಿಗೆ ಬೇಲೂರಿಗೆ ಬರ ಮಾಡಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಸೆ.30 ಮತ್ತು ಅ.1ರಂದು ನಡೆಯುವ ಕಾರ್ಯಕ್ರಮಕ್ಕೆ 5 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಅಗತ್ಯ ಸೌಕರ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಕಲ್ಯಾಣ ಮಂಟಪದಲ್ಲಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಡೆಯಲಿದ್ದು, ಹೊರಭಾಗದ ವೇದಿಕೆಯಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಜಗದ್ಗುರುಗಳ ನೇತೃತ್ವದಲ್ಲಿ ಶಿವದೀಕ್ಷೆ, ವಧುವರರ ಸಮ್ಮೇಳನ, ವೀರಶೈವ ಲಿಂಗಾಯತ ಪುರೋಹಿತ ಅರ್ಚಕರ ಟ್ರಸ್ಟ್ ಉದ್ಘಾಟನೆ, ವಾರ್ಷಿಕ ಮಹಾಸಭೆ ಲೋಕ ಕಲ್ಯಾಣಾರ್ಥ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆ ನಡೆದಿದೆ. ಯಾವುದೇ ಜಾತಿ, ಪಕ್ಷಕ್ಕೆ ಸೀಮಿತಗೊಳಿಸದೆ ಸರ್ವರನ್ನೂ ಒಳಗೊಂಡಂತೆ ನಡೆಸಲು ಸಮಿತಿ ನಿರ್ಧರಿಸಿದೆ. ಯಾವುದೇ ಅಹಿತಕರ ಘಟನೆಗೂ ಅವಕಾಶವಾಗದಂತೆ ಸಮಿತಿಯವರು ಜಾಗರೂಕತೆಯಿಂದ ಕಾರ್ಯನಿರ್ವಹಿಸಿ ಆಗಮಿಸುವ ಭಕ್ತರಿಗೆ ಆತ್ಮೀಯ ಆತಿಥ್ಯ ನೀಡಬೇಕು ಎಂದರು.
ವೀರಶೈವ ಲಿಂಗಾಯತ ಜಂಗಮ ಪುರೋಹಿತರ ಟ್ರಸ್ಟ್ ಅಧ್ಯಕ್ಷ ವಿರೂಪಾಕ್ಷ ಶಾಸ್ತ್ರಿ, ಉಮೇಶ್ ಶಾಸ್ತ್ರಿ, ವಿಜಯಕುಮಾರ್ ಶಾಸ್ತ್ರಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕೈಗಾರಿಕಾ ಘಟಕದ ನಿರ್ದೇಶಕ ಗೆಂಡೆಹಳ್ಳಿ ಚೇತನ್, ಪ್ರದೀಪ್ ಸೇರಿದಂತೆ ಇತರರಿದ್ದರು.