- ಕಲಬುರಗಿ ಆಟೋ ಪಾರ್ಕ್ ಸ್ಥಾಪನೆ: ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ನವಕಲಬುರಗಿ ನಿರ್ಮಾಣ ಮಾಡಲು ನೀಲಿ ನಕ್ಷೆ ತಯಾರಾಗಿದೆ ಮುಂದಿನ ಎರಡು ವರ್ಷಗಳಲ್ಲಿ ಕಲಬುರಗಿಯ ಸಮಗ್ರ ನಿರ್ಮಾಣ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್,ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ನೆಹರು ಗಂಜ್ ಪ್ರದೇಶದಲ್ಲಿ ಎಸ್ ಆರ್ ಕೆ ಸಭಾಂಗಣದಲ್ಲಿ RAMP (Raising and Accelerating MSME Performance ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು) ಯೋಜನೆಡಿಯಲ್ಲಿ ಎಲ್ಲಾ ಪ್ರಕಾರದ ಆಟೋಮೊಬೈಲ್ ಸರ್ವೀಸ್ ಘಟಕದವರಿಗಾಗಿ ಏಪ್ರೀಲ್ 9 ಹಾಗೂ 10 ರಂದು ನಡೆಯುವ ಎರಡು ದಿನಗಳ ಟೆಕ್ನಾಲಜಿ ಕ್ಲಿನಿಕ್ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕೈಗಾರಿಕೆ, ಕೃಷಿ, ಪ್ರವಾಸೋದ್ಯಮ, ಸೌಂದರ್ಯತೆ, ಮೂಲಭೂತ ಸೌಲಭ್ಯ ಅಭಿವೃದ್ದಿ, ಶಿಕ್ಷಣ ಮುಂತಾದ ಕ್ಷೇತ್ರಗಳನ್ನು ಸಬಲಗೊಳಿಸಿ ಕಲಬುರಗಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸುವ ಮೂಲಕ ರಾಜ್ಯದ ಜಿಡಿಪಿಗೆ ಇನ್ನೂ ಹೆಚ್ಚಿನ ಕೊಡುವ ಉದ್ದೇಶ ಹೊಂದಲಾಗಿದೆ. ಪ್ರಸ್ತುತ 1.5% ಮಾತ್ರ ಕಲಬುರಗಿಯ ಕೊಡುಗೆ ಇದ್ದು ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಷ್ಟಾಗಿದೆ. ನಾವು 2.5% ಆಗಿ ಮುಂದುವರೆಯಬೇಕೆಂದರೆ ಎಲ್ಲ ರಂಗಗಳಲ್ಲಿ ಬೆಳವಣಿಗೆ ಹೊಂದಬೇಕಿದೆ.
ನವತಂತ್ರಜ್ಞಾನ ಬಳಸಿಕೊಂಡು ಜಿಲ್ಲೆಯಲ್ಲಿ ಕೈಗಾರಿಕೋದ್ಯಮದ ಬೆಳವಣಿಗೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಸೆಪ್ಟೆಂಬರ್ 17 ರಂದು ಸಿಎಂ ಸಿದ್ದರಾಮಯ್ಯ ಅವರು ನೀಡಿದ ಭರವಸೆಯಂತೆ ನಂದೂರು ಬಳಿ ಮ್ಯಾನ್ಯುಫ್ಯಾಕ್ಷರಿಂಗ್ ಎಕ್ಸಪೋರ್ಟ್ ತಯಾರಾಗಿದೆ.
ಇಂಜಿನಿಯರಿಂಗ್, ಐಟಿಐ ಮುಂತಾದ ಪದವಿ ಪಡೆದವರಿಗಾಗಿ ಸ್ಟಾರ್ಟ್ ಅಪ್ ಸ್ಥಾಪನೆ ಮಾಡಲಾಗುವುದು. ಕೃಷಿ ಹಾಗೂ ತೋಟಗಾರಿಕೆಗೆ ಉತ್ತೇಜನ ನೀಡಲು ಕಮಲಾಪುರ ಬಾಳೆ ಹಣ್ಣನ್ನು ದೇಶ ವಿದೇಶ ಗಳಲ್ಲಿ ಪ್ರಸಿದ್ದಿ ಪಡಿಸಲು ಪ್ರಯತ್ನ ಮಾಡಲಾಗುವುದು.
ಕಲಬುರಗಿ ಆಟೋ ಪಾರ್ಕ ವೆಂಬ ಸಾಮಾನ್ಯ ಹೆಸರಿನಿಂದ ಕರೆಯಲುಪಡುವ ಆಟೋಮೋಟಿವ್ ಸರ್ವೀಸಿಂಗ್ ಮತ್ತು ಜನರಲ್ ಎಂಜಿನಿಯರಿAಗ್ ಕೈಗಾರಿಕಾ ಪಾರ್ಕ್/ಎಸ್ಟೇಟ್, 3ನೇ ಹಂತ, ಕೆ.ಐ.ಎ.ಡಿ.ಬಿ. ಕಪನೂರ ಕೈಗಾರಿಕಾ ಪ್ರದೇಶ, ಕಲಬುರಗಿಯಲ್ಲಿ ಆಟೋಮೋಬೈಲ್ ವಾಹನಗಳ ದುರಸ್ತಿ, ಫ್ಯಾಬ್ರಿಕೇಷನ್, ಎಲೇಷನ್ ವರ್ಕ, ಜನರಲ್ ಇಂಜಿನಿಯರಿಂಗ್ ಮತ್ತು ಸಂಬಂಧಪಟ್ಟ ಎಲ್ಲಾ ವೃತ್ತಿಗಳ ಸುಮಾರು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳನ್ನು ಕಲಬುರಗಿ ನಗರದ ವಿವಿಧ ಭಾಗಗಳಲ್ಲಿ ಬಾಡಿಗೆ ಸ್ಥಳದಲ್ಲಿ ಹಾಗೂ ರಸ್ತೆ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆ ಕೈಗಾರಿಕಾ ಘಟಕಗಳನ್ನು ಸ್ಥಳಾಂತರಿಸಿ ಒಂದು ಸೂರಿನ ಅಡಿ ಸೂಕ್ತ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ಹೊರವಲಯದಲ್ಲಿ ಖಾಲಿವಿರುವ ಮತ್ತು ಅಭಿವೃದ್ಧಿ ಪಡಿಸಿದ 20 ಎಕರೆ ಜಾಗದಲ್ಲಿ "ಕಲಬುರಗಿ ಆಟೋ ಪಾರ್ಕ" ನಿರ್ಮಾಣ ಮಾಡಲಾಗುವುದು. ಈ ಉದ್ದೇಶಕ್ಕಾಗಿ, ಜಾಗ ಹಂಚಿಕೆ ಮಾಡಲು
ದಿನಾಂಕ: 18-10-2025 ರಂದು ನಡೆದ ಕೆ.ಐ.ಎ.ಡಿ.ಬಿ. ಯ ಮಂಡಳಿ ಸಭೆಯಲ್ಲಿ ಈಗಾಗಲೇ ಅನುಮೋದನೆ ಪಡೆಯಲಾಗಿದೆ. ಇದು ಒಂದು ಕಲಬುರಗಿ ಜಿಲ್ಲೆಯ ಮಹತ್ವಕಾಂಕ್ಷಿ ಯೋಜನೆಯಾಗಿದೆ ಎಂದು ಖರ್ಗೆ ವಿವರಿಸಿದರು.
ಕಲಬುರಗಿ ಆಟೋ ಪಾರ್ಕ್ ಆಟೋಮೊಬೈಲ್ ಸೇವಾ ಘಟಕಗಳ ಪ್ರತ್ಯೇಕ ಕೈಗಾರಿಕಾ ವಸಾಹತುನಂತೆ ಕಾರ್ಯನಿರ್ವಹಿಸಲಿದೆ. ಸದರಿ ಪಾರ್ಕ್ ಸ್ಥಾಪನೆಯಿಂದ ಸುಮಾರು 2000 ಜನರಿಗೆ ಪ್ರತ್ಯೇಕವಾಗಿ ಹಾಗೂ 5000 ಜನರಿಗೆ ಪರೋಕ್ಷವಾಗಿ ಉದ್ಯೋಗ ಸಿಗಲಿದೆ. ಈಗಾಗಲೇ ಸುಮಾರು 700 ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಉತ್ತರ ವಲಯದ ಶಾಸಕಿ ಕನೀಜ್ ಫಾತಮ್ ಅವರು ಮಾತನಾಡಿ, ನಗರದ ಆಟೋ ರಿಕ್ಷಾ ಚಾಲಕರು ಮತ್ತು ಮೆಕ್ಯಾನಿಕ್‌ಗಳ ದಶಕಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ನಗರದ ಹೊರವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ 'ಆಟೋ ನಗರ' ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಈ ಕುರಿತು ಶಾಸಕಿ ಕನೀಜ್ ಫಾತಿಮಾ ಅವರು ಸಂತಸ ವ್ಯಕ್ತಪಡಿಸಿದರು.ಅದೇ ರೀತಿಯಾಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪಾಟೀಲ ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ವಿಧಾನ ಪರಿಷತ್ ಸದಸ್ಯರುಗಳಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕರ್ನಾಟಕ ರಸ್ತೆ ಸಾರಿಗೆ ಸಂಸೇಯ ಅಧ್ಯಕ್ಷ ಅರುಣಕುಮಾರ ಎಂ.ವೈ ಪಾಟೀಲ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಅಲ್ಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿಇಓ. ಭಂವರ್ ಸಿಂಗ್ ಮೀನಾ, ಲೀಡ್ ಬ್ಯಾಂಕ್ ಮಾನ್ಯೇಜರ್ ರವಿ ಗೌಡ ಸೇರಿದಂತೆ ಅಧಿಕಾರಿಗಳು ಹಲವರಿದ್ದರು.