ವಿಧಾನಸೌಧ 
ರಾಜ್ಯ

ಸಂಪುಟ ರಚನೆ ಬಳಿಕ ನಿಗಮ ಪುನಾರಚನೆಗೆ ಮುನ್ನುಡಿ

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆ ಆಗುತ್ತಿದ್ದಂತೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳ ಬದಲಾವಣೆಗೂ ಕೂಗು ಕೇಳಿಬರುತ್ತಿದೆ. ಹೊಸ ಅಧ್ಯಕ್ಷರ ನೇಮಕಕ್ಕೂ ದಿನಾಂಕ ನಿಗದಿ ಆಗಲಿದ್ದು, ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.
2023ರಲ್ಲಿ ಸರ್ಕಾರ ರಚನೆಯಾದಾಗ ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚಿತರು, ಸಚಿವ ಸ್ಥಾನ ಕೈತಪ್ಪಿದ ಶಾಸಕರಿಗೆ, ಚುನಾವಣೆಗಾಗಿ ದುಡಿದ ಮುಖಂಡರು, ಕಾರ್ಯಕರ್ತರನ್ನು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನೇಮಕ ಮಾಡಿತ್ತು. ಈ ವೇಳೆ ಎರಡೂವರೆ ವರ್ಷಕ್ಕೆ ಬದಲಾವಣೆ ಮಾಡುವ ಷರತ್ತು ವಿಧಿಸಲಾಗಿತ್ತು. 73ರಲ್ಲಿ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ 35 ಶಾಸಕರನ್ನು ನೇಮಿಸಲಾಗಿತ್ತು. ಇದಾದ ಮೇಲೆ ಟಿಕೆಟ್ ವಂಚಿತರು, ಕಾರ್ಯಕರ್ತರಿಗೆ ಅವಕಾಶ ನೀಡಲಾಗಿತ್ತು. ಇತ್ತೀಚೆಗೆ ಉಳಿದ 35 ನಿಗಮ-ಮಂಡಳಿಗಳಿಗೂ ನೇಮಕ ಪ್ರಕ್ರಿಯೆ ಮುಗಿದಿತ್ತು. ಆದರೆ ಅಧಿಕಾರ ಹಸ್ತಾಂತರ ಮತ್ತು ಸಚಿವ ಸಂಪುಟ ಪುನಾರಚನೆ ಗೊಂದಲ ಹಿನ್ನೆಲೆಯಲ್ಲಿ 73 ನಿಗಮ-ಮಂಡಳಿ ಅಧ್ಯಕ್ಷ ಅವಧಿಯನ್ನು 3 ವರ್ಷಕ್ಕೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಅಧಿಕಾರ ಹಸ್ತಾಂತರ ಮತ್ತು ಹೊಸ ಸಂಪುಟ ರಚನೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಗಳನ್ನು ಬಿಟ್ಟುಕೊಡಬೇಕಾದ ಸಂದರ್ಭ ಬಂದಿದೆ.
ಕಳೆದ ಬಾರಿಯಂತೆ ಸಚಿವ ಸ್ಥಾನ ವಂಚಿತರು ಮತ್ತು ಪಕ್ಷಕ್ಕಾಗಿ ದುಡಿದವರಿಗೆ ಒಳ್ಳೆಯ ನಿಗಮ-ಮಂಡಳಿ ಸ್ಥಾನಗಳನ್ನು ಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್, ಅಧಿಕಾರ ಅನುಭವಿಸದೇ ಇದ್ದವರಿಗೆ ಅವಕಾಶ ಕೊಡಲಿದ್ದಾರೆ ಎಂಬ ಭರವಸೆಯನ್ನು ಮುಖಂಡರು ಇಟ್ಟುಕೊಂಡಿದ್ದಾರೆ.
ಅದೇ ರೀತಿಯಾಗಿ ಪ್ರಸ್ತುತ ನಿಗಮ-ಮಂಡಳಿ ಅಧ್ಯಕ್ಷರಾಗಿರುವ ಕೆಲ ಶಾಸಕರಿಗೆ ಸಚಿವ ಸ್ಥಾನ ಸಿಕ್ಕರೆ ಆ ಜಾಗಕ್ಕೆ ಹೊಸಬರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಒಂದು ವೇಳೆ ಈ ಬಾರಿಯೂ ಸಚಿವ ಸ್ಥಾನ ಸಿಗದೇ ಇದ್ದರೆ ಅಂತಹ ಶಾಸಕರನ್ನು ಮುಂದುವರಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದರೆ, ಇತ್ತೀಚೆಗೆ ನೇಮಕಗೊಂಡಿರುವ 35 ನಿಗಮಗಳ ಅಧ್ಯಕ್ಷರು ಸಹ ಬದಲಾವಣೆ ಕೇಳುತ್ತಿದ್ದಾರೆ. ಬಜೆಟ್ ಇಲ್ಲದ ನಿಗಮಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅನುದಾನ ಇರುವ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.

2028ರ ಚುನಾವಣೆ ಟಾರ್ಗೆಟ್

ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೇಮಕದಲ್ಲಿಯೂ ಕಾಂಗ್ರೆಸ್ 2028ರ ವಿಧಾನಸಭಾ ಚುನಾವಣೆ ಮುಂದಿಟ್ಟುಕೊಂಡು ಲೆಕ್ಕಾಚಾರ ನಡೆಸುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಸಿಗದೇ ಇದ್ದವರನ್ನು ಮತ್ತು ಸಚಿವ ಸ್ಥಾನ ವಂಚಿತರನ್ನು ಸಕ್ರಿಯವಾಗಿ ಇಟ್ಟುಕೊಂಡು ಅಧ್ಯಕ್ಷ ಸ್ಥಾನದ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಉಳಿದ ಎರಡೂ ವರ್ಷದಲ್ಲಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರು, ಮುಖಂಡರನ್ನು ಜನ ಸಂಪರ್ಕದಲ್ಲಿ ಇರುವಂತೆ ಮಾಡುವುದೇ ಟಾರ್ಗೆಟ್ ಆಗಿದೆ. ಈಗಾಗಲೇ ನಿಗಮ ಮಂಡಳಿ ಅಧ್ಯಕ್ಷರಾಗಿರುವವರ ಪೈಕಿ 15 ಶಾಸಕರು ಸಚಿವಾಕಾಂಕ್ಷಿಗಳಾಗಿದ್ದು, ಪ್ರಬಲ ಪೈಪೋಟಿ ನೀಡಿದ್ದಾರೆ. ಕನಿಷ್ಠ ಐದು ಮಂದಿಗಾದರೂ ಅವಕಾಶ ಸಿಗುವ ಸಾಧ್ಯತೆಯೂ ಇದೆ.

ಯಾರೆಲ್ಲ ಶಾಸಕರಿಗೆ ಅವಕಾಶ:

ಸೋಪ್ಸ್ ಮತ್ತು ಡಿಟರ್ಜೆಂಟ್ ನಿಗಮ- ಅಪ್ಪಾಜಿ ಸಿ.ಎಸ್.ನಾಡಗೌಡ
ವಾಯವ್ಯ ಸಾರಿಗೆ ನಿಗಮ- ಭರಮಗೌಡ ಅಲಗೌಡ ಕಾಗೆ
ರಾಜ್ಯ ರಸ್ತೆ ಅಭಿವೃದ್ಧಿ ನಿಗಮ- ಎಸ್.ಆರ್.ಶ್ರೀನಿವಾಸ(ವಾಸು)
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ- ಬಸವರಾಜ್ ನೀಲಪ್ಪ ಶಿವಣ್ಣನವರ್
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ- ಬಿ.ಜಿ.ಗೋವಿಂದಪ್ಪ
ರಾಜ್ಯ ರಸ್ತೆ ಅಭಿವೃದ್ಧಿ ನಿಗಮ-ಎಚ್.ಸಿ.ಬಾಲಕೃಷ್ಣ
ಖನಿಜ ಅಭಿವೃದ್ಧಿ ನಿಗಮ- ಜಿ.ಎಸ್.ಪಾಟೀಲ್
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ- ಎನ್.ಎ. ಹ್ಯಾರಿಸ್
ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್- ಸಿ.ಪುಟ್ಟರಂಗಶೆಟ್ಟಿ
ಹಟ್ಟಿ ಚಿನ್ನದ ಗಣಿ ನಿಗಮ- ಜಿ.ಟಿ.ಪಾಟೀಲ್
ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮ- ಬಿ.ಕೆ.ಸಂಗಮೇಶ್ವರ್
ಕರ್ನಾಟಕ ಗೃಹ ಮಂಡಳಿ- ಕೆ.ಎಂ.ಶಿವಲಿಂಗೇಗೌಡ
ಕೊಳಚೆ ಅಭಿವೃದ್ಧಿ ಮಂಡಳಿ- ಅಬ್ಬಯ್ಯ ಪ್ರಸಾದ್
ರಾಜ್ಯ ಅರಣ್ಯ ಕೈಗಾರಿಕಾ ನಿಗಮ- ಬಿ.ಕೆ.ಗೋಪಾಲಕೃಷ್ಣ ಬೇಳೂರು
ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ- ಎಸ್.ಎನ್.ನಾರಾಯಣಸ್ವಾಮಿ,
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ- ಟಿ.ರಘುಮೂರ್ತಿ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ- ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ
ಜಂಗಲ್ ಲಾಡ್ಜ್- ಅನಿಲ್ ಚಿಕ್ಕಮಾದು
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ- ಬಸವನಗೌಡ ದದ್ದಲ್
ರೇಷ್ಮೆ ಉದ್ದಿಮೆಗಳ ನಿಗಮ- ಕನೀಜ್ ಾತಿಮಾ
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ- ಟಿ.ಡಿ.ರಾಜೇಗೌಡ
ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ- ಎಂ.ರೂಪಕಲಾ
ಮಾರ್ಕೆಟಿಂಗ್ ಕನ್ಸಲೈಂಟ್ ಆ್ಯಂಡ್ ಏಜೆನ್ಸಿಸ್- ಸತೀಶ್ ಕೃಷ್ಣ ಸೈಲ್
ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ- ಶರತ್‌ಕುಮಾರ್ ಬಚ್ಚೇಗೌಡ
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ- ಬಸವನಗೌಡ ತುರುವಿಹಾಳ