ದೇವನಹಳ್ಳಿ ತಾಲೂಕಿನ ಅರದೇಶಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಾಲಿಗೆ ಶ್ರೀರಾಮಯ್ಯ ಇತರರು ಇದ್ದರು.
ಕುಂದಾಣ : ಪ್ರೇಕ್ಷಕರನ್ನು ಆಕರ್ಷಿಸುವಪೌರಾಣಿಕ ನಾಟಕ ಪ್ರದರ್ಶನಕ್ಕೆ ಆದ್ಯತೆ ನೀಡಲು ಗ್ರಾಮೀಣ ಪ್ರತಿಭೆಗಳು ಆಸಕ್ತಿ ವಹಿಸಬೇಕು ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.
ದೇವನಹಳ್ಳಿ ತಾಲೂಕಿನ ಅರದೇಶಹಳ್ಳಿಯಲ್ಲಿ ಇತ್ತೀಚೆಗೆ ಡಾ.ಅಂಬೇಡ್ಕರ್ ಯುವಕರ ಸಂಘ ಮತ್ತು ಶ್ರೀ ವಿನಾಯಕ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸಲು ಪೌರಾಣಿಕ ನಾಟಕಗಳು ಅತ್ಯವಶ್ಯ. ಇತ್ತೀಚೆಗೆ ಡಿಜಿಟಲ್ ಸಿನಿಮಾಗಳ ಆಕರ್ಷಣೆ ಜನರಿಗೆ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವಂತಹ ನಟನೆಗಳು ಮಾರಕವಾಗಿದೆ. ಕಲೆ, ಸಾಹಿತ್ಯ, ಸಂಸತಿ ಕನ್ನಡಿಗರಿಗೆ ಸ್ಫೂರ್ತಿದಾಯಕ. ನಯ, ವಿನಯತೆ ಹಾಗೂ ಹಿರಿಯರು, ಕಿರಿಯರು, ಗುರುಗಳ ಬಗ್ಗೆ ಗೌರವ ತಂದು ಕೊಡುವ ಪಾತ್ರಗಳನ್ನು ಪೌರಾಣಿಕ ನಾಟಕಗಳಲ್ಲಿ ಮಾತ್ರ ತಿಳಿಯಲು ಸಾಧ್ಯ. ಯುವ ಪೀಳಿಗೆ ಅಡ್ಡದಾರಿಗಳತ್ತ ಮುಖಮಾಡದೆ, ಇಂತಹ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದರೇ ಪ್ರಜ್ಞಾವಂತರಾಗುತ್ತಾರೆ. ಈ ನಿಟ್ಟಿನಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಗಳಾಗಿ ಉಳಿಸಿಕೊಳ್ಳಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸರಬರಾಜು ಮತ್ತು ಮಾರಾಟ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆಯ ನಾಟಕ ಕುರುಕ್ಷೇತ್ರ. ಪೂರ್ವಜರು ಉಳಿಸಿ ಬೆಳೆಸಿಕೊಂಡು ಬಂದಂತಹ ಕಲೆ, ಸಾಹಿತ್ಯ, ಸಂಸತಿ ಸೇರಿ ಹತ್ತು ಹಲವು ಸಂಪ್ರದಾಯ ಒಳಗೊಂಡಿದೆ. ಇಂತಹ ತಂತ್ರಜ್ಞಾನ ಯುಗದಲ್ಲೂ ಕೆಲ ಭಾಗಗಳಲ್ಲಿ ಪೌರಾಣಿಕ ಕಲೆ ಜೀವಂತವಾಗಿವೆ ಎಂದರೆ ಕಲೆಯಲ್ಲೂ ಶ್ರೀಮಂತಿಕೆ ಕಂಡಂತ ದೇಶ ನಮ್ಮದು ಎಂದರು.
ಗುತ್ತಿಗೆದಾರ ಬಚ್ಚೇಗೌಡ, ಡಾ.ಅಂಬೇಡ್ಕರ್ ಯುವಕರ ಸಂಘ ಪದಾಧಿಕಾರಿಗಳಾದ ಮೋಹನ್, ಶಿವಕುಮಾರ್, ವೆಂಕಟೇಶ್, ಪ್ರಭಾಕರ್, ಆನಂದ್, ಚೇತನ್ ಇತರರು ಇದ್ದರು.