ಪೂರ್ವ ಮುಂಗಾರು ಮಳೆ  
ರಾಜ್ಯ

ಪೂರ್ವ ಮುಂಗಾರು ಮಳೆಯಿಂದ ಬೆಳೆಗಳಿಗೆ ವರದಾನ: ಏ.12ವರೆಗೆ ಹಲವೆಡೆ ಮಳೆ

ಬೆಂಗಳೂರು: ಪ್ರಸ್ತುತ ಉತ್ತಮವಾಗಿ ಪೂರ್ವ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಂಠಿ ಸೇರಿ ಇತರ ಮಾದರಿಯ ಬೆಳೆಗಳಿಗೆ ಅನುಕೂಲವಾಗುತ್ತಿದೆ. ಇದರಿಂದ ಬೋರ್‌ವೆಲ್‌ಗಳ ಮೇಲೆ ಅವಲಂಬನೆ ತುಸು ತಗ್ಗಿದೆ.
ಬೇಸಿಗೆ ಹಂಗಾಮಿನಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶ, ಕೆರೆ ಅಚ್ಚುಕಟ್ಟು ಪ್ರದೇಶ ಮತ್ತು ಬಯಲುಸೀಮೆಯಲ್ಲಿ ಅಂತರ್ಜಲ ಆಧಾರಿತ ಬೋರ್‌ವೆಲ್ ನೀರಾವರಿ ಪ್ರದೇಶಗಳಲ್ಲಿ ಏಕದಳ ಧಾನ್ಯ ಸೇರಿ ವಿವಿಧ ಬಗೆಯ ತರಕಾರಿ ಬೆಳೆ ಬೆಳೆಯುತ್ತಾರೆ. ಹಾಸನ, ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ಬೆಂ. ಗ್ರಾಮಾಂತರ ಜಿಲ್ಲೆಗಳ ರೈತರು, ಆಲೂಗಡ್ಡೆ, ಟೊಮೆಟೊ, ಬೀನ್ಸ್, ಕ್ಯಾರೆಟ್, ಬೀಟ್‌ರೂಟ್, ಎಲೆಕೋಸು, ಹೂಕೋಸು, ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಸೌತೆಕಾಯಿ, ತೊಂಡೆಕಾಯಿ ಬೆಳೆ ಬೆಳೆಯುತ್ತಾರೆ.
ಅಲ್ಲದೆ, ಮೈಸೂರು ಭಾಗದಲ್ಲಿ ಮುಖ್ಯವಾಗಿ ನಂಜನಗೂಡು ಸುತ್ತಮುತ್ತ ದ್ವಿದಳ ಧಾನ್ಯಗಳು ಬೆಳೆಯುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಸರು, ಉದ್ದು, ಸೋಯಾ ಬಿತ್ತನೆ ಮಾಡುತ್ತಾರೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭತ್ತ ಬಿತ್ತನೆ ಮಾಡುತ್ತಾರೆ. ಪೂರ್ವ ಮುಂಗಾರಿನ ಅವಧಿಯಲ್ಲಿ ಬೀಳುವ ಮಳೆಯಿಂದಾಗಿ ಇಳೆಗೆ ತಂಪು ಜೊತೆಗೆ ಬೆಳೆಗಳಿಗೂ ನೀರಿನಾಂಶ ನೀಡಲಿದೆ. ಅದರಂತೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ 3-4 ಬಾರಿ ಉತ್ತಮ ಮಳೆ ಸುರಿದಿದ್ದು, ಬೆಳೆಗಳಿಗೆ ವರದಾನವಾಗಿದೆ.
ವರ್ಷಕ್ಕೆ 2 ಬೆಳೆ ಬೆಳೆಯಬಹುದು:
ಮುಂಗಾರು ಮುನ್ನ ರೈತರು ಅಲ್ಪಾವಧಿ ಬೆಳೆಗೆ ಆದ್ಯತೆ ನೀಡಿದರೆ ವರ್ಷದಲ್ಲಿ 2 ಬೆಳೆ ಬೆಳೆಯಬಹುದು. ಏಕೆಂದರೆ, ಹಲವು ವರ್ಷಗಳಿಂದ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಅಂತರ್ಜಲ ಕುಸಿತವಾಗಿ ಬೋರ್‌ವೆಲ್ ಬತ್ತಲಿವೆ. ಆದರೆ, ಏಪ್ರಿಲ್, ಮೇನಲ್ಲಿ ಉತ್ತಮ ಮಳೆಯಾಗುವುದರಿಂದ ಅಂತರ್ಜಲ ಮರುಪೂರಣವಾಗುವ ಜೊತೆಗೆ ಅಲ್ಪಾವಧಿ ಬೆಳೆಗಳಿಗೆ ಅನುಕೂಲವಾಗಲಿದ್ದು, ಕೊಳವೆಬಾವಿ, ವಿದ್ಯುತ್ ಬಳಕೆ ಮೇಲೆ ಅವಲಂಬನೆ ಕಡಿಮೆಯಾಗಲಿದೆ. ಜಾನುವಾರುಗಳಿಗೆ ಮೇವು ಒದಗಿಸುವ ಹುಲ್ಲುಗಾವಲು ಹಸಿರೀಕರಣಗೊಳಿಸಲು ಮಳೆ ಸಹಾಯ ಮಾಡಲಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳುತ್ತಾರೆ.
ವಾಡಿಕೆಗಿಂತ ಅಧಿಕ ಮಳೆ: ಪ್ರಸಕ್ತ ತಿಂಗಳಲ್ಲಿ ವಾಡಿಕೆಗಿಂತ ಅಧಿಕವಾಗಿ ಮಳೆಯಾಗಲಿದೆ. ವಾಡಿಕೆಯಂತೆ 30 ಮಿಮೀ ಮಳೆಯಾಗಬೇಕಿತ್ತು. ಆದರೆ. 60 ಮಿಮೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಗಾಗಲೇ ಮುನ್ಸೂಚನೆ ಕೊಟ್ಟಿದ್ದು, ಇದು ರೈತರಿಗೆ ವರದಾನವಾಗಿದೆ.
ವಾಡಿಕೆಯಂತೆ ಉಷ್ಣಾಂಶ ದಾಖಲು:ಆಗಾಗ್ಗೆ ಮಳೆ ಸುರಿಯುತ್ತಿರುವುದು, ಮೋಡ ಕವಿದ ವಾತಾವರಣ ಸೇರಿ ಇತರ ಕಾರಣಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದೆ. ಕೆಲ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿ.ಸೆ. ಉಷ್ಣಾಂಶ ಕುಸಿತವಾಗಿದೆ. ಕನಿಷ್ಠ ತಾಪಮಾನದಲ್ಲಿ 1-2 ಡಿ.ಸೆ. ಇಳಿಮುಖವಾಗಿದೆ. ಆದರೆ. ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದ್ದರೂ ಬಿಸಿಲಿನ ತೀವ್ರತೆಯು ಹೆಚ್ಚು ಪರಿಣಾಮಕಾರಿಯಾಗಿದೆ.
ಏ.12ವರೆಗೆ ಹಲವೆಡೆ ಮಳೆ: ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಲಬುರಗಿಯಲ್ಲಿ ಏ.6ರಿಂದ ಏ.12ವರೆಗೆ ಬಿರುಗಾಳಿ ಸಹಿತ ವರ್ಷಧಾರೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ, ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಮುಂದಿನ 3 ದಿನ ಮತ್ತು ರಾಯಚೂರಿನಲ್ಲಿ ಏ.7ರಿಂದ ಏ.9ವರೆಗೆ ಹಾಗೂ ಯಾದಗಿರಿಯಲ್ಲಿ ಏ.9ರಿಂದ ಏ.12ರವರೆಗೆ ಸಾಧಾರಣ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.