ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಕೊಡಗು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ  
ರಾಜ್ಯ

ಮಳೆಗಾಗಿ ಇಗ್ಗುತ್ತಪ್ಪನ ಮೊರೆ: ಕೊಡಗಿನಲ್ಲಿ ಸಚಿವ ನರೇಂದ್ರಸ್ವಾಮಿ ವಿಶೇಷ ಪೂಜೆ | Special puja for rain

ಪ್ರಮುಖ ಮುಖ್ಯಾಂಶಗಳು

  • ಮಳೆಗಾಗಿ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ
  • ರುದ್ರಾಭಿಷೇಕ ನೆರವೇರಿಸಿ ಮಳೆ ಬರಲಿ ಎಂದು ಪ್ರಾರ್ಥನೆ
  • ಕೊಡಗಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವ ಪಿ.ಎಂ.ನರೇಂದ್ರಸ್ವಾಮಿ
ಮಡಿಕೇರಿ: ರಾಜ್ಯದಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೊಡಗು ಉಸ್ತುವಾರಿ ಸಚಿವ ಪಿಎಂ ನರೇಂದ್ರಸ್ವಾಮಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ಭಾನುವಾರ ಮುಂಜಾನೆ ವಿರಾಜಪೇಟೆ ತಾಲ್ಲೂಕಿನ ಕಕ್ಕಬ್ಬೆಯ ಪುಣ್ಯಕ್ಷೇತ್ರ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಬೇಕು, ಜಲಾಶಯಗಳು ಭರ್ತಿಯಾಗಬೇಕು, ಕೃಷಿಗೆ ಅನುಕೂಲವಾಗಬೇಕು ಹಾಗೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬರಬಾರದು ಎಂದು ಸಚಿವರು ದೇವರಲ್ಲಿ ಪ್ರಾರ್ಥಿಸಿದರು. ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರಸ್ವಾಮಿ, ‘ಕಾವೇರಿ ಹಾಗೂ ಇಗ್ಗುತ್ತಪ್ಪನ ನಾಡಿನಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿ ಎಂಬುದು ನಮ್ಮ ಪ್ರಾರ್ಥನೆ’ ಎಂದರು.

ಕಾವೇರಿ ವಿವಾದಕ್ಕೂ ಪರಿಹಾರ ಸಾಧ್ಯ

ಮುಂದುವರಿದಂತೆ, ಕಾವೇರಿ ನದಿ ಪಾತ್ರದಲ್ಲಿ ಸರಾಸರಿ ಮಳೆಯಾದರೆ ಡ್ಯಾಂಗಳು ಭರ್ತಿಯಾಗುವುದರ ಜೊತೆಗೆ ಅಂತರರಾಜ್ಯ ಜಲ ವಿವಾದಗಳಿಗೂ ಪರಿಹಾರ ಸಾಧ್ಯವಾಗಲಿದೆ. ಮಳೆಯ ಅಭಾವದಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹೆಚ್ಚಿನ ಮಳೆಗಾಗಿ ದೇವರ ಮೊರೆ ಹೋಗಲಾಗಿದೆ ಎಂದದರು.

ಕಾಡಾನೆಗಳ ಹಾವಳಿ ಬಗ್ಗೆ ಕ್ರಮ

ಇನ್ನು, ಕೊಡಗಿನಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಡಾನೆ ದಾಂದಲೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದರು. ಪ್ರವಾಸಿಗರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಕೂಡ ಕಾಡಾನೆಗಳ ಸಂಚಾರದ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.