ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  
ರಾಜ್ಯ

ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಸಹೋದ್ಯೋಗಿಗಳೊಂದಿಗೆ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪೂರ್ಣಕುಂಭ, ಮುಟ್ಟಾಳೆ ಧರಿಸಿದ ಗೃಹಲಕ್ಷ್ಮೀ-ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರ ಮಂಗಳಾರತಿ ಹಾಗೂ ಯಕ್ಷಗಾನ ಕಲಾವಿದರ ಪುಷ್ಪವೃಷ್ಟಿಯೊಂದಿಗೆ ಗಣ್ಯರನ್ನು ಬರಮಾಡಿಕೊಳ್ಳಲಾಯಿತು.

ಸಂಕಲ್ಪ ಆಶೀರ್ವಾದ: ಬೆಳಗ್ಗೆ 11:30ಕ್ಕೆ ಪಂಚಾಮೃತ ಸಹಿತ ಏಕಾದಶ ರುದ್ರಾಭಿಷೇಕ ನೆರವೇರಿಸಿ, ರಾಜ್ಯದ ಸುಭಿಕ್ಷೆ ಹಾಗೂ ಕರಾವಳಿಯ ಏಳಿಗೆಗಾಗಿ ಪ್ರಾರ್ಥಿಸಲಾಯಿತು. ದೇವಾಲಯದ ವತಿಯಿಂದ ಶೇಷವಸ್ತ್ರ ನೀಡಿ ಗೌರವಿಸಲಾಯಿತು. ಸಿಎಂ ಹೆಸರಿನಲ್ಲಿ ಭಕ್ತರಿಗೆ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿತ್ತು.

ತೆರೆದ ಬಸ್ ಮೆರವಣಿಗೆ

ಕದ್ರಿ ದರ್ಶನದ ಬಳಿಕ ಪಂಪ್‌ವೆಲ್ ವೃತ್ತಕ್ಕೆ ಆಗಮಿಸಿದ ನಾಯಕರು, ಸಂಪುಟ ಸಭೆ ನಡೆಯುವ ಪಡಿಲಿನ ಪ್ರಜಾ ಸೌಧಕ್ಕೆ ತೆರಳಲು ವಿಶೇಷವಾಗಿ ಅಲಂಕರಿಸಲಾಗಿದ್ದ ತೆರೆದ ಅಂಬಾರಿ ಬಸ್ ಏರಿದರು. ಸುಡುಬಿಸಿಲಿನ ನಡುವೆಯೂ ರಸ್ತೆಯುದ್ದಕ್ಕೂ ನೆರೆದಿದ್ದ ನೂರಾರು ಜನರಿಗೆ ನಾಯಕರು ಕೈಬೀಸಿದರು. ಮೆರವಣಿಗೆಯಲ್ಲಿ ಚೆಂಡೆ ವಾದನ, ಹುಲಿವೇಷ, ಗೊಂಬೆ, ಕೊರಗರ ಕೊಳಲು ವಾದನ ಹಾಗೂ ನಾಸಿಕ್ ಬ್ಯಾಂಡ್‌ಗಳು ಕರಾವಳಿಯ ಸಾಂಸ್ಕೃತಿಕ ಮೆರುಗು ತುಂಬಿದವು.

ಕಾರ್ಯಕರ್ತರ ಉತ್ಸಾಹ

ಮಂಗಳೂರಿನಲ್ಲಿ ತೀವ್ರ ಉರಿಬಿಸಿಲು ಹಾಗೂ ಸೆಖೆಯ ವಾತಾವರಣವಿದ್ದರೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಸ್ತೆಯ ಎರಡೂ ಬದಿಗಳಲ್ಲಿ ಸಾಲಾಗಿ ನಿಂತು ಬೃಹತ್ ಹಾರಗಳನ್ನು ಹಾಕಿ ಸಂಭ್ರಮಿಸಿದರು. ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಕೆಲವು ಸಚಿವರು ಬಿಳಿ ಬಣ್ಣದ ಟೋಪಿಗಳನ್ನು ಧರಿಸಿದ್ದರೆ, ಪ್ರಿಯಾಂಕ್ ಖರ್ಗೆ, ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಮೆರವಣಿಗೆಯಲ್ಲಿ ಪರಸ್ಪರ ಚರ್ಚಿಸುತ್ತಾ ಜನರಿಗೆ ಶುಭಾಶಯ ಕೋರಿದರು.

ಮುಂದಿನ ಅವಧಿಯೂ ಸಿಎಂ ಆಗಿ ಬನ್ನಿ

ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ದೇವರ ಆಶೀರ್ವಾದ ಪಡೆದ ವೇಳೆ ಪುರೋಹಿತರು ‘ಮುಂದಿನ ಅವಧಿಯಲ್ಲೂ ಮುಖ್ಯಮಂತ್ರಿಗಳಾಗಿಯೇ ಶ್ರೀಕ್ಷೇತ್ರಕ್ಕೇ ಆಗಮಿಸುವಂತೆ ಆಶೀರ್ವದಿಸಿದರು.

ಕದ್ರಿ ಯುದ್ದ ಸ್ಮಾರಕ್ಕೆ ಭೇಟಿ

ಕದ್ರಿ ಶ್ರೀ ಮಂಜುನಾಥ ದೇವಾಲಯಕ್ಕೆ ಬೇನೀಡುವ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ಕದ್ರಿ ಯುದ್ದ ಸ್ಮಾರಕ್ಕೆ ಭೇಟಿ ನೀಡಿ ದೇಶದ ಸೈನಿಕರಿಗೆ ಗೌರವ ಸಲ್ಲಿಸಿಸಿದರು.

ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಜತೆ ಸಂವಾದ

ದೇವಾಲಯ ಭೇಟಿಗೂ ಮುನ್ನ ಮುಖ್ಯಮಂತ್ರಿಗಳು ಮಂಗಳೂರಿನ ಸ್ಥಳೀಯ ಸಾಮಾಜಿಕ ಜಾಲತಾಣ ಪ್ರಭಾವಿಗಳೊಂದಿಗೆ ಉಪಹಾರ ಸಭೆ ನಡೆಸಿದರು. ಮಂಗಳೂರನ್ನು ರಾತ್ರಿಯ ವೇಳೆಯಲ್ಲೂ ಸಕ್ರಿಯವಾಗಿರುವ ಹಾಗೂ ಜಾಗತಿಕ ಪ್ರವಾಸಿ ತಾಣವಾಗಿ ರೂಪಿಸಲು ಸಾಮಾಜಿಕ ಜಾಲತಾಣಗಳ ಪಾತ್ರ ಮಹತ್ವದ್ದು ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಭಟನೆಯ ಬಿಸಿ!

ಸಂಪುಟ ಸಭೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ನಗರದಲ್ಲಿ ಮೂರು ಪ್ರತ್ಯೇಕ ಪ್ರತಿಭಟನೆಗಳು ನಡೆದವು.
ಎಸ್‌ಡಿಪಿಐ ಕಪ್ಪು ಬಾವುಟ ಪ್ರದರ್ಶನ: ಬಂಟ್ವಾಳದ ರಹ್ಮಾನ್ ಕೊಳತ್ತಮಜಲು ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ದೊರೆಯಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿ, ಸ್ಟೇಟ್‌ಬ್ಯಾಂಕ್ ಬಳಿಯ ರಾವ್ ರಾವ್ ವೃತ್ತದಲ್ಲಿ ಸಿಎಂ ಬೆಂಗಾವಲು ವಾಹನಕ್ಕೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ವಕೀಲರ ಸಂಘದ ಮುತ್ತಿಗೆ ಯತ್ನ: ಮಂಗಳೂರು ಜಿಲ್ಲಾ ಕಾರಾಗೃಹದ ಜಾಮರ್‌ನಿಂದಾಗಿ ಕೋರ್ಟ್ ಆವರಣದಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿರುವುದನ್ನು ವಿರೋಧಿಸಿ, ಪ್ರಜಾ ಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಸೇರಿದಂತೆ ಹಲವರನ್ನು ನ್ಯಾಯಾಲಯದ ಆವರಣದಲ್ಲೇ ತಡೆಯಲಾಯಿತು.

ಸಿಪಿಐಎಂ 21 ಬೇಡಿಕೆಗಳ ಜಾಥಾ

ಜನಪರ ಅಭಿವೃದ್ಧಿ ನೀತಿ, ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಒತ್ತು ನೀಡುವಂತೆ ಆಗ್ರಹಿಸಿ 21 ಬೇಡಿಕೆಗಳ ಪತ್ರ ಸಲ್ಲಿಸಲು ಹೊರಟ ಸಿಪಿಐಎಂ ಮುಖಂಡರನ್ನು ಬೆಂದೂರ್‌ವೆಲ್ ವೃತ್ತದ ಬಳಿ ತಡೆದು ವಶಕ್ಕೆ ಪಡೆಯಲಾಯಿತು.