ರಾಷ್ಟ್ರೀಯ ಬಸವದಳ, ಬಸವಕೇಂದ್ರ, ಬಸವ ತತ್ವ ಮತ್ತು ಪ್ರಸಾರ ಕೇಂದ್ರದಿಂದ ಬಸವಕಲ್ಯಾಣದ ಪವಿತ್ರ ಪರುಷಕಟ್ಟೆಯಲ್ಲಿ ವರುಣನ ಕೃಪೆಗಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. 
ರಾಜ್ಯ

ವರುಣ ಕೃಪೆಗಾಗಿ ಪರುಷ ಕಟ್ಟೆಯಲ್ಲಿ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಹಾಳಾಗುವ ಹಂತಕ್ಕೆ ತಲುಪಿದ ಬಿತ್ತಿದ ಬೀಜ
  • ಸಂಕಷ್ಟದಲ್ಲಿ ಅನ್ನದಾತ
ಬಸವಕಲ್ಯಾಣ: ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂಡೆದೆ ಜನ ವರುಣನ ಕೃಪೆಗಾಗಿ ಪೂಜೆ, ಪ್ರಾರ್ಥನೆ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ.
ಜುಲೈ ಎರಡು ವಾರವಾದರೂ ಮಳೆ ಇಲ್ಲ. ಹೀಗಾಗಿ ತಾಲೂಕಿನಲ್ಲಿ ಶೇ.5 ರೈತರು ಬಿತ್ತನೆಯೇ ಮಾಡಿಲ್ಲ. ಆರಂಭದಲ್ಲಿ ಮಳೆ ನಿರೀಕ್ಷೆಯಲ್ಲಿ ಬಿತ್ತಿದ ಬೀಜಗಳು ಮೊಳಕೆ ಹಂತದಲ್ಲಿ ಹಾಳಾಗುತ್ತಿವೆ.
ಬಸವಪರ ಸಂಘಟನೆಗಳು, ರಾಷ್ಟ್ರೀಯ ಬಸವದಳ, ಬಸವಕೇಂದ್ರ, ಬಸವ ತತ್ವ ಮತ್ತು ಪ್ರಸಾರ ಕೇಂದ್ರದ ಪ್ರಮುಖರು ಮತ್ತು ರೈತರು ಗುರುವಾರ ಪವಿತ್ರ ಪರುಷ ಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು. 12ನೆಯ ಶತಮಾನದಲ್ಲಿ ಗುರು ಬಸವಣ್ಣನವರು ಪರುಷ ಕಟ್ಟೆಯಲ್ಲಿ ಕುಳಿತು ಜನರ ಕಷ್ಟಗಳಿಗೆ ಪರಿಹಾರ ನೀಡುತ್ತಿದ್ದರು. ಹೀಗಾಗಿ ಇಂಥ ಪವಿತ್ರ ಸ್ಥಳದಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಬೇಡಿಕೆ ಈಡೇರುತ್ತದೆ, ಸಂಕಲ್ಪ ಸಿದ್ಧಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಗುಣತೀರ್ಥ ವಾಡಿಯ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಿ ಮಳೆ ಮತ್ತು ರೈತರ ಸಂಕಷ್ಟ ಪರಿಹಾರಕ್ಕಾಗಿ ಪ್ರಾರ್ಥಿಸಲಾಯಿತು. ಬಸವ ತತ್ವ ಮತ್ತು ಪ್ರಸಾರ ಕೇಂದ್ರ ಅಧ್ಯಕ್ಷ ಜಯಪ್ರಕಾಶ ಸದಾನಂದೆ, ಹುಲಸೂರ ಬಸವ ಕೇಂದ್ರ ಅಧ್ಯಕ್ಷ ಆಕಾಶ ಖಂಡಾಳೆ, ಬಸವದಳ ಅಧ್ಯಕ್ಷ ರವೀಂದ್ರ ಕೊಳಕೂರ, ಹುಲಸೂರು ತಾಲೂಕು ಅಧ್ಯಕ್ಷ ದತ್ತಾತ್ರೇಯ ರಾವ, ಚಂದ್ರಶೇಖರ ಜಮಖಂಡಿ, ಗಣಪತಿ ಕಾಸ್ತೆ, ಸಂಗಮೇಶ ತೊಗರಖೇಡೆ, ಜಗದೀಶ ನೆಲವಡಕರ್​, ಸೋನಾಲಿ ನೀಲಕಂಠ, ಕವಿತಾ ಸಜ್ಜನ್​. ಸಚಿನ್​ ಕವಟೆ, ಶಿವಕುಮಾರ ಪಾಟೀಲ್​ ಕಾದೆಪುರ ಇತರರಿದ್ದರು.
"


ಸಮೃದ್ಧ ಮಳೆ-ಬೆಳೆ ಆಗುವುದರ ಜತೆ ದನಕರುಗಳಿಗೆ ಕುಡಿಯಲು ನೀರು ಸಿಗಬೇಕು. ರೈತರ ಸಂಕಷ್ಟಗಳಿಗೆ ಪರಿಹಾರ ದೊರೆತು ಬದುಕಿನಲ್ಲಿ ಬೆಳಕು ಮೂಡಬೇಕು ಎಂದು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದೇವೆ. ದೇವರು ಮುನಿದರೂ ಗುರು ಮುನಿಯುವುದಿಲ್ಲ. ಸಕಲ ಜೀವಾತ್ಮರಿಗೆ ಲೇಸು ಬಯಸಿದ ಗುರು ಬಸವಣ್ಣನವರ ಪವಿತ್ರ ಸ್ಥಳ ಪರುಷ ಕಟ್ಟೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ವರುಣ ದೇವ ಶೀಘ್ರದಲ್ಲೇ ಭೂಮಿಯನ್ನು ತಂಪಾಗಿಸಿ ರೈತರ ಸಂಕಷ್ಟ ದೂರ ಮಾಡಲಿದ್ದಾನೆ

— > ಶ್ರೀ ಬಸವಪ್ರಭು ಸ್ವಾಮೀಜಿ
"


ಪವಿತ್ರ ಪರುಷ ಕಟ್ಟೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬಸವ ಕೃಪೆಯಿಂದ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಕೊರತೆಯಿಂದಾಗಿ ಬಿತ್ತನೆಗೆ ಹಿನ್ನಡೆಯಾಗಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು. ಬೀದರ್​ ಜಿಲ್ಲೆ ಬರಪೀಡಿತ ಘೋಷಿಸಿ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಬೇಕು.

— > ರವೀಂದ್ರ ಕೊಳಕೂರ ತಾಲೂಕು ಅಧ್ಯಕ್ಷ, ರಾಷ್ಟ್ರಿಯ ಬಸವದಳ