ಪ್ರಶಾಂತ್ ರಿಪ್ಪನ್‌ಪೇಟೆಗೆ ‘ಶಿವಕಮಲ ಸಾಹಿತ್ಯ ಪ್ರಶಸ್ತಿ’ ಪ್ರದಾನ  
ರಾಜ್ಯ

ಪ್ರಶಾಂತ್ ರಿಪ್ಪನ್‌ಪೇಟೆಗೆ ‘ಶಿವಕಮಲ ಸಾಹಿತ್ಯ ಪ್ರಶಸ್ತಿ’ ಪ್ರದಾನ

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿ ಹಿರಿಯ ವರದಿಗಾರ ಪ್ರಶಾಂತ್ ರಿಪ್ಪನ್‌ಪೇಟೆ ಅವರಿಗೆ ‘ಶಿವಕಮಲ ಸಾಹಿತ್ಯ ಪ್ರಶಸ್ತಿ’ ಪ್ರದಾನ
  • ಪ್ರಶಸ್ತಿ ಮೊತ್ತವನ್ನು ರಾಜರಾಜೇಶ್ವರಿನಗರದಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಟೆಲ್‌ಗೆ 10 ಸಾವಿರ ರೂ. ನಗದು ನೀಡಿದ ಪ್ರಶಾಂತ್ ರಿಪ್ಪನ್‌ಪೇಟೆ
  • ದಾನಿಗಳ ಕೊಡುಗೆ ನೀಡಿದರೆ ಮುಂದಿನ ಧನುರ್ಮಾಸದ ಕಾರ್ಯಕ್ರಮದ ವೇಳೆ ಹಾಸ್ಟೆಲ್ ಉದ್ಘಾಟಿಸಬಹುದು ಎಂಬ ಕರೆ
ಬೆಂಗಳೂರು: ಕಮಲ ನೀರಲ್ಲಿದ್ದರೂ ನೀರನ್ನು ಅಂಟಿಸಿಕೊಳ್ಳದಂತೆ, ಸಂಸಾರದಲ್ಲಿದ್ದು ಸಂಸಾರ ಅಂಟಿಸಿಕೊಳ್ಳದಂತೆ ಇರಬೇಕು. ಬುದ್ದಿ ವಿಕಾರಗೊಳದಂತೆ ಸಿಟ್ಟನ್ನು ನಿಯಂತ್ರಿಸಿಕೊಂಡು ಸಾಧನೆ ಮಾಡಬೇಕು ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.
ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ವತಿಯಿಂದ ವಿಜಯವಾಣಿ ಹಿರಿಯ ವರದಿಗಾರ ಪ್ರಶಾಂತ್ ರಿಪ್ಪನ್‌ಪೇಟೆ ಅವರಿಗೆ ‘ಶಿವಕಮಲ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹಾಸ್ಟೆಲ್ ನಿರ್ಮಾಣಕ್ಕೆ ನಗದು:

ಬೆಂಗಳೂರಿನ ದಾನಚಿಂತಾಮಣಿ ಶಿವಪ್ಪ ಶೆಟ್ಟರು ಮತ್ತು ಕಮಲಮ್ಮ ದಂಪತಿಗಳ ಸ್ಮಾರಕವಾಗಿ ಅವರ ಪುತ್ರ ವಾಗಿಶ್ ಪ್ರಸಾದ್ ಅವರು ಪ್ರಶಸ್ತಿಯ ಪ್ರಾಯೋಜಕತ್ವ ವಹಿಸಿದ್ದಾರೆ. ಪ್ರಶಸ್ತಿಯು 11 ಸಾವಿರ ನಗದು ಮತ್ತು ಫಲಕವನ್ನು ಹೊಂದಿದೆ.
ಈ ಪ್ರಶಸ್ತಿ ಸ್ವೀಕರಿಸಿದ ಪ್ರಶಾಂತ್ ರಿಪ್ಪನ್‌ಪೇಟೆ ಅವರು ಸಮುದಾಯದಿಂದ ರಾಜರಾಜೇಶ್ವರಿನಗರದಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಟೆಲ್‌ಗೆ 10 ಸಾವಿರ ರೂ. ನಗದನ್ನು ಇದೇ ವೇಳೆ ನೀಡಿದರು. ಅನುದಾನದ ಕೊರತೆಯಿಂದ ಹಾಸ್ಟೆಲ್ ಕಟ್ಟಡ ನಿರ್ಮಾಣ ಹಂತದಲ್ಲಿ ನಿಂತಿದ್ದು, ದಾನಿಗಳ ಕೊಡುಗೆ ನೀಡಿದರೆ ಮುಂದಿನ ಧನುರ್ಮಾಸದ ಕಾರ್ಯಕ್ರಮದ ವೇಳೆ ಹಾಸ್ಟೆಲ್ ಉದ್ಘಾಟಿಸಬಹುದು ಎಂಬ ಕರೆ ನೀಡಿದರು. ಇದಕ್ಕೆ ಸ್ಥಳದಲ್ಲಿಯೇ ಸ್ಪಂದಿಸಿದ
ಪೋಷಕ ಮಂಡಳಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಒಂದು ಲಕ್ಷ ರೂ. ನಗದು ನೀಡುವುದಾಗಿ ೊಷಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸತತ ಎರಡು ಗಂಟೆಗಳ ಕಾಲ ಗಾನಸುಧಾ ತಂಡ ಮತ್ತು ವಿಭೂತಿಪುರ ಮಠದ ವಿದ್ಯಾರ್ಥಿಗಳಿಂದ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಸಲಾಯಿತು.
ಸಮಾರಂಭದಲ್ಲಿ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು. ವಿಭೂತಿಪುರ, ದಹಿವಡ್ಕರ್ ಶ್ರೀಗಳು, ಪ್ರತಿಷ್ಠಾನದ ಬಿ.ಎಸ್. ಪರಮಶಿವಯ್ಯ, ಡಾ.ಸಿ.ಶಿವಕುಮಾರಸ್ವಾಮಿ, ಪ್ರಣಾಮ್ ಜಯಲಿಂಗಪ್ಪ, ಉಮಾದೇವಿ ಉಮಾಶಂಕರ್, ಶಾಂತಾ ವಿ.ಗೌಡ ಮತ್ತಿತರರು ಉಪಸ್ಥಿತರಿದ್ದರು.