ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾದ ಪ್ರಭಾ ನಾಗರಾಜ್ ಅವರನ್ನು ಮುಖಂಡರು ಸನ್ಮಾನಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಬಂತಿ ವೆಂಕಟೇಶ್, ಸದಸ್ಯರಾದ ತ.ನ ಪ್ರಭುದೇವ, ಮಲ್ಲೇಶ್, ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ನಿರ್ದೇಶಕ ಮಂಜುನಾಥ ಇತರರು ಇದ್ದರು.
ದೊಡ್ಡಬಳ್ಳಾಪುರ : ಸುಮಿತ್ರಾ ಆನಂದ್ ಅವರ ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್-&ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಭಾ ನಾಗರಾಜ್ ಶನಿವಾರ ಚುನಾಯಿತರಾದರು.
31 ಸದಸ್ಯರನ್ನು ಹೊಂದಿರುವ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್-&ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಭಾ ನಾಗರಾಜ್, ಕಾಂಗ್ರೆಸ್ ಅಭ್ಯರ್ಥಿಯಾಗಿ ರೂಪಿಣಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು.
ಪ್ರಭಾ ನಾಗರಾಜ್ಗೆ 24 ಹಾಗೂ ರೂಪಿಣಿ ಮಂಜುನಾಥ್ಗೆ 9 ಮತಗಳು ಬಂದಿದ್ದು, ಬಹುಮತ ಪಡೆದ ಪ್ರಭಾ ನಾಗರಾಜ್ ನಗರಸಭೆಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಮಂಜುನಾಥ್, ನಗರಸಭೆ ಪೌರಾಯುಕ್ತ ಆರ್.ಕಾರ್ತಿಕೇಶ್ವರ ಚುನಾವಣಾ ಕರ್ತವ್ಯ ನಿರ್ವಹಿಸಿದರು.
ಸಂಸದ ಡಾ.ಕೆ.ಸುಧಾಕರ್ ಹಾಗೂ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಸಹ ಮತ ಚಲಾಯಿಸಿದರು.
ಸಂಸದ ಡಾ.ಕೆ ಸುಧಾಕರ್ ಮಾತನಾಡಿ, ನೂತನ ಅಧ್ಯಕ್ಷರ ನೇತೃತ್ವದಲ್ಲಿ ದೊಡ್ಡಬಳ್ಳಾಪುರವು ಇನ್ನಷ್ಟು ಅಭಿವೃದ್ಧಿಯತ್ತ ಮುನ್ನಡೆಯಲಿ. ಮೂಲಸೌಕರ್ಯ, ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ಸಾರ್ವಜನಿಕ ಸೇವೆಗಳು ಸೇರಿ ನಾಗರಿಕರ ಬದುಕಿನ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಜನಪರ ಆಡಳಿತ ನೀಡುವಂತಾಗಲಿ ಎಂದು ಹಾರೈಸಿದರು.