ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಪ್ರಾರಂಭಗೊಂಡಿರುವುದು. 
ರಾಜ್ಯ

ಆಲಮಟ್ಟಿ ವಿದ್ಯುತ್ ಉತ್ಪಾದನೆ ಪ್ರಾರಂಭ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಲಾಲ ಬಹಾದ್ದೂರ ಶಾಸೀ ಸಾಗರದ ಒಳ ಹರಿವು ಏರಿಕೆ
  • ನಾರಾಯಣಪುರ ಬಸವಸಾಗರಕ್ಕೆ ಹರಿದ ಜಲ
ಆಲಮಟ್ಟಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಾರಂಭವಾಗಿ, ಲಾಲ ಬಹಾದ್ದೂರ ಶಾಸೀ ಸಾಗರದ ಒಳ ಹರಿವು ಹೆಚ್ಚಾಗಿದೆ.
ಕುಡಿವ ನೀರಿನ ಸಲುವಾಗಿ ನಾರಾಯಣಪುರದ ಬಸವಸಾಗರಕ್ಕೆ ಇಲ್ಲಿನ ಕೆಪಿಸಿಎಲ್ ಮುಖಾಂತರ ಹರಿಸುವ ಮುಖೇನ ವಿದ್ಯುತ್ ಉತ್ಪಾದನಾ ಘಟಕ ಶನಿವಾರದಿಂದ ಪ್ರಾರಂಭಗೊಂಡಿದೆ. ಕುಡಿವ ನೀರಿನ ಲಭ್ಯತೆಯನ್ನು ಖಚಿತಪಡಿಸುವ ಉದ್ದೇಶದಿಂದ ಆಲಮಟ್ಟಿ ಜಲಾಶಯದಿಂದ ನದಿ ಪಾತ್ರಕ್ಕೆ ನೀರು ಹರಿಸುವ ಕಾರ್ಯವನ್ನು ಶನಿವಾರ ಸಂಜೆ ಆರಂಭಿಸಲಾಗಿದೆ. ಆರಂಭಿಕ ಹಂತದಲ್ಲಿ ಜಲವಿದ್ಯುದಾಗಾರದ ಮೂಲಕ 4,500 ಕ್ಯುಸೆಕ್ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಸಲಾಗುತ್ತಿದ್ದು, ರಾತ್ರಿ ವೇಳೆಗೆ ಈ ಪ್ರಮಾಣವನ್ನು 8 ಸಾವಿರ ಕ್ಯುಸೆಕ್‌ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
ಜಲವಿದ್ಯುದಾಗಾರದ 55 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಸಂಜೆ ವೇಳೆಗೆ ಸುಮಾರು 40 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ನೀರಿನ ಹರಿವಿನ ಪ್ರಮಾಣ ಹೆಚ್ಚಿದಂತೆ ವಿದ್ಯುತ್ ಉತ್ಪಾದನೆಯೂ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಾಶಯದಿಂದ ಬಿಡುಗಡೆಗೊಳ್ಳುತ್ತಿರುವ ನೀರು ನಾರಾಯಣಪುರ ಜಲಾಶಯ ತಲುಪಲಿದ್ದು, ಅಲ್ಲಿಂದ ವಿವಿಧ ನಗರಗಳು ಹಾಗೂ ಗ್ರಾಮಗಳಿಗೆ ಕುಡಿವ ನೀರಿನ ಪೂರೈಕೆಗೆ ಅನುಕೂಲವಾಗಲಿದೆ. ಬೇಸಿಗೆ ಮತ್ತು ಮಳೆ ಕೊರತೆ ಸಂದರ್ಭಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ, ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಆಲಮಟ್ಟಿ ಜಲಾಶಯ ವ್ಯಾಪ್ತಿಯ ನಾನಾ ಕಾಲುವೆಗಳಿಗೂ ಈಗಾಗಲೇ ನೀರು ಹರಿಸಲು ಆರಂಭಿಸಲಾಗಿದೆ. ಇದರಿಂದ ವಿಜಯಪುರ, ಬಾಗಲಕೋಟೆ ಸೇರಿ ಜಲಾಶಯ ವ್ಯಾಪ್ತಿಯ ಅನೇಕ ಪ್ರದೇಶಗಳ ಕೆರೆಗಳು ತುಂಬಲಿದ್ದು, ಅಂತರ್ಜಲ ಮಟ್ಟ ಹೆಚ್ಚಳಕ್ಕೂ ನೆರವಾಗುವ ನಿರೀಕ್ಷೆಯಿದೆ.