ಕೆಪಿಟಿಸಿಎಲ್ ಅಭಿನಂದನಾ ಸಮಾರಂಭ 
ರಾಜ್ಯ

ವಿದ್ಯುತ್ ನಿಗಮ ಖಾಸಗೀಕರಣ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಡಿಕೆಶಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಬಾರದು ಎಂದು ನೀವು ಹೋರಾಟ ಮಾಡುತ್ತಿದ್ದೀರಿ. ಆದರೆ, ಇದು ಪ್ರಸ್ತಾಪವಾಗಿದ್ದು 2003ರಲ್ಲಿ ಬಿಜೆಪಿ ಸರ್ಕಾರವು ಈ ಕಾನೂನು ತಂದಿತು.
  • ಯಾರೊಬ್ಬರೂ ಇದರ ವಿರುದ್ಧ ಧ್ವನಿ ಎತ್ತಲಿಲ್ಲ. ಯಾರೂ ಹೋರಾಟ ಮಾಡಲಿಲ್ಲ, ಧಿಕ್ಕಾರ ಹೇಳಲಿಲ್ಲ. ಈಗ ನನ್ನ ಬಳಿ ಬಂದು ಖಾಸಗೀಕರಣ ಮಾಡಬೇಡಿ ಎಂದು ಹೇಳುತ್ತಿದ್ದೀರಿ
  • ಬಿಜೆಪಿ ತಂದಿರುವ ಕಾನೂನು ಸರಿ ಇಲ್ಲ ಎಂದು ಎಂದಾದರೂ ಮಾತನಾಡಿದ್ದಾರಾ ?
ಬೆಂಗಳೂರು: ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ಬಗ್ಗೆ ನಾನೊಬ್ಬನೇ ತೀರ್ಮಾನಿಸಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿಮ್ಮ ಅಭಿಪ್ರಾಯದ ಮೇರೆಗೆ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ವತಿಯಿಂದ ಅರಮನೆ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಬಾರದು ಎಂದು ನೀವು ಹೋರಾಟ ಮಾಡುತ್ತಿದ್ದೀರಿ. ಆದರೆ, ಇದು ಪ್ರಸ್ತಾಪವಾಗಿದ್ದು 2003ರಲ್ಲಿ ಬಿಜೆಪಿ ಸರ್ಕಾರವು ಈ ಕಾನೂನು ತಂದಿತು. ಯಾರೊಬ್ಬರೂ ಇದರ ವಿರುದ್ಧ ಧ್ವನಿ ಎತ್ತಲಿಲ್ಲ. ಯಾರೂ ಹೋರಾಟ ಮಾಡಲಿಲ್ಲ, ಧಿಕ್ಕಾರ ಹೇಳಲಿಲ್ಲ. ಈಗ ನನ್ನ ಬಳಿ ಬಂದು ಖಾಸಗೀಕರಣ ಮಾಡಬೇಡಿ ಎಂದು ಹೇಳುತ್ತಿದ್ದೀರಿ. ಬಿಜೆಪಿ ತಂದಿರುವ ಕಾನೂನು ಸರಿ ಇಲ್ಲ ಎಂದು ಎಂದಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.

ಗೀವ್ ಆೃಂಡ್ ಟೇಕ್ ಪಾಲಿಸಿ

ನೀವು ಡಿಕೆ, ಡಿಕೆ ಎಂದು ಕೂಗಿದಾಕ್ಷಣ ನಾನು ಜಗ್ಗುವುದಿಲ್ಲ. ನಮ್ಮದು ಏನಿದ್ದರೂ ಗೀವ್ ಆೃಂಡ್ ಟೇಕ್ (ಕೊಡು, ಕೊಳ್ಳುವ), ಶೇರಿಂಗ್ ಆೃಂಡ್ ಕೇರಿಂಗ್ ಪದ್ಧತಿ. ನೀವು ನಮಗೆ ಕಾಳಜಿ ತೋರಬೇಕು, ನಾವು ನಿಮಗೆ ಕಾಳಜಿ ತೋರಬೇಕು. ಈ ಒಪ್ಪಂದಕ್ಕೆ ನೀವು ಬದ್ಧರಾಗಿರುತ್ತೀರಾ? 2028ರಲ್ಲಿ ನಿಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ತಾನೆ? ನುಡಿದಂತೆ ನಡೆಯಬೇಕು, ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂಬ ವಾಗ್ದಾನ ಪಡೆದರು.
ನಿಮ್ಮ ಮೇಲೆ ನಂಬಿಕೆ ಇಟ್ಟು ನಾನು ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೇನೆ. ನೀವು ಮೋಸ ಮಾಡಿದರೆ ನಾನು ವಾಜಪೇಯಿ ಅವರ ಸರ್ಕಾರದ ತೀರ್ಮಾನದ ಕಡೆ ಮುಖ ಮಾಡುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂಬ ಎಚ್ಚರಿಕೆ ನೀಡಿದರು.
ಇದೇ ವೇಳೆ ಸಂಘದ ವತಿಯಿಂದ ಮುಖ್ಯಮಂತ್ರಿ ಅವರಿಗೆ ಬೇಡಿಕೆಗಳ ಅಹವಾಲು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್, ವಿವಿಧ ನಿಗಮಗಳ ಅಧ್ಯಕ್ಷರು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೆಪಿಟಿಸಿಎಲ್ ಪ್ರಮುಖ ಬೇಡಿಕೆಗಳು
- ಟಾಟಾ ಪವರ್ ಕಂಪನಿಯು ಸಮಾನಾಂತರ ವಿದ್ಯುತ್ ಪರವಾನಗಿ ಕೋರಿ ಕೆಇಆರ್‌ಸಿಗೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು. ಖಾಸಗೀಕರಣ ಮಾಡಬಾರದು.
- 2006ಕ್ಕಿಂತ ಮೊದಲು ಪ್ರಕಟವಾಗಿದ್ದ ಅಧಿಸೂಚನೆಯಲ್ಲಿ ನೇಮಕವಾಗಿರುವ ನೌಕರರಿಗೆ ಒಪಿಎಸ್ ಜಾರಿಗೊಳಿಸಬೇಕು.
- ವಿದ್ಯುತ್ ಅಪಘಾತಗಳ ಸಂದರ್ಭದಲ್ಲಿ ನೌಕರರರು ಮತ್ತು ಇಂಜಿಯರ್‌ಗಳ ಮೇಲೆ ದಾಖಲಿಸುವ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬಾರದು.
-ನಿಗದಮದಲ್ಲಿ ಕೇಂದ್ರೀಕೃತವಾಗಿರುವ ‘ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರ’ದ ಅಧಿಕಾರವನ್ನು ಮತ್ತೆ ವಿಕೇಂದ್ರೀಕರಣಗೊಳಿಸಿ ಸ್ಥಳೀಯ ಅಧಿಕಾರಿಗಳಿಗೆ ಮರುಸ್ಥಾಪಿಸಬೇಕು.
"

ವಿದ್ಯುತ್ ಕ್ಷೇತ್ರವು ಸಾರ್ವಜನಿಕ ಸೇವೆಯಲ್ಲಿ ಪ್ರಮುಖ ಇಲಾಖೆಯಾಗಿದೆ. ಯಾವುದೇ ಕಾರಣಕ್ಕೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಬಾರದು. ವಿದ್ಯುತ್ ಸಾಗಣೆ ಮತ್ತು ವಿತರಣೆಯನ್ನು ಸರ್ಕಾರದ ಅಧೀನದಲ್ಲಿಯೇ ಮುಂದುವರಿಸಬೇಕು.

— - ಕೆ. ಬಲರಾಮ್, ಸಂಘದ ಅಧ್ಯಕ್ಷ