ಸರಗೂರು ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮ ಆಚರಿಸಲಾಯಿತು. ಡಾ.ಟಿ.ರವಿಕುಮಾರ್, ಡಾ.ಶರತ್ ಇತರರಿದ್ದರು.
- ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರ
ಸರಗೂರು: ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಜು.11ರಂದು ಆಚರಿಸಲಾಗುತ್ತಿದ್ದು, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸವಾಲುಗಳು, ಕುಟುಂಬ ಯೋಜನೆಯ ಮಹತ್ವ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನದ ಪ್ರಮುಖ ಉದ್ದೇಶ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನರ ಆಸೆ ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವುದು ಈ ವರ್ಷದ ಘೋಷವಾಕ್ಯವಾಗಿದೆ. 1987ರ ಜು.11ರಂದು ವಿಶ್ವದ ಜನಸಂಖ್ಯೆ 5 ಬಿಲಿಯನ್ ತಲುಪಿದ ಹಿನ್ನೆಲೆಯಲ್ಲಿ ಆ ದಿನಕ್ಕೆ ಮಹತ್ವ ದೊರೆತ ಬಳಿಕ 1989ರಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಅಧಿಕೃತವಾಗಿ ಆಚರಣೆಗೆ ಬಂತು ಎಂದು ವಿವರಿಸಿದರು.
ಹೆಚ್ಚು ಜನಸಂಖ್ಯೆಯಿಂದ ಉಂಟಾಗುವ ಬಡತನ, ನಿರುದ್ಯೋಗ, ಪರಿಸರ ನಾಶದಂತಹ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು, ಕುಟುಂಬ ಯೋಜನೆಗೆ ಉತ್ತೇಜನ ನೀಡುವುದು, ಮಹಿಳೆಯರ ಆರೋಗ್ಯ ಮತ್ತು ಲಿಂಗ ಸಮಾನತೆಗೆ ಒತ್ತು ನೀಡುವುದು, ಮಾನವ ಹಕ್ಕುಗಳ ರಕ್ಷಣೆ ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಕುಟುಂಬ ಯೋಜನೆಯ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಸ್.ಶರತ್ ಮಾತನಾಡಿ, ವಿಶ್ವ ಜನಸಂಖ್ಯಾ ದಿನ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಕುಟುಂಬ ಯೋಜನೆ, ತಾಯಿ ಮತ್ತು ಶಿಶು ಆರೋಗ್ಯ, ಮಹಿಳೆಯರ ಸಬಲೀಕರಣ ಹಾಗೂ ಯುವಜನರಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಪ್ರಯತ್ನವಾಗಬೇಕು ಎಂದು ಹೇಳಿದರು.
ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸಂಬಂಧಿತ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರೂ ಕುಟುಂಬ ಯೋಜನೆ ಮತ್ತು ಆರೋಗ್ಯ ಸೇವೆಗಳ ಬಗ್ಗೆ ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಕರೆ ನೀಡಿದರು.