ಪ್ರತಾಪ್ ಚೌಹಾಣ್, ಆರ್.ಆರ್.ನಗರ : ನಗರದ ಪ್ರಮುಖ ರಸ್ತೆಗಳು ಗುಂಡಿಬಿದ್ದು ಹಾಳಗಿದ್ದು, ದಿನದಿಂದ ದಿನಕ್ಕೆ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಗಳಲ್ಲಿ ಬೃಹತ್ ಗಾತ್ರದ ಹೊಂಡ-ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ಬಂದಾಗ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಆರ್.ಆರ್.ನಗರ ಮುಖ್ಯರಸ್ತೆಯಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ.
ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಂತಹ ಪ್ರಮುಖ ಮಾರ್ಗಗಳು ಕೂಡಾ ಗುಂಡಿಗಳಿಂದಾಗಿ ಅವ್ಯವಸ್ಥೆಯ ಆಗರವಾಗಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಬೇಡ್ಕರ್ ಕಾಲೇಜು ಸಮೀಪದ ಸಿಗ್ನಲ್‌ನಿಂದ ನಾಗರಭಾವಿ ಮುಖ್ಯ ರಸ್ತೆ, 80 ಅಡಿ ರಸ್ತೆ, ವಿನಾಯಕ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ. ರಸ್ತೆಯ ಡಾಂಬರು ಸಂಪೂರ್ಣವಾಗಿ ಕಿತ್ತುಹೋಗಿ ಅಲ್ಲಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು, ಆಟೋ ಹಾಗೂ ಇತರ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸುತ್ತಮುತ್ತ ಸಂಚರಿಸುವ ಸಿಟಿ ಬಸ್‌ಗಳು ನಿಲ್ಲುವ ಹಾಗೂ ತಿರುಗುವ ಸ್ಥಳಗಳಲ್ಲಿಯೇ ದೊಡ್ಡ ಗುಂಡಿಗಳು ನಿರ್ಮಾಣವಾಗಿರುವುದು ಸಾಕಷ್ಟು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ವಯೋವೃದ್ಧರು, ಮಕ್ಕಳು ಹಾಗೂ ಮಹಿಳೆಯರು ರಸ್ತೆ ದಾಟುವಾಗ ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು ರಸ್ತೆಯ ಬದಿಯಲ್ಲಿ ನಿಲ್ಲಲು ಸೂಕ್ತ ಸ್ಥಳವಿಲ್ಲದೆ ವಾಹನಗಳ ನಡುವೆಯೇ ನಿಲ್ಲಬೇಕಾದ ಪರಿಸ್ಥಿತಿ ಕೆಲವೆಡೆ ಕಂಡುಬಂದಿದೆ. ಇನ್ನು ಗುಂಡಿಗಳನ್ನು ತಪ್ಪಿಸಿಕೊಂಡು ಬಸ್ ಚಲಾಯಿಸಲು ಚಾಲಕರು ಹರಸಾಹಸ ಪಡುತ್ತಿದ್ದಾರೆ. ರಸ್ತೆಯ ದುಸ್ಥಿತಿಯಿಂದಾಗಿ ಬಸ್‌ಗಳು ನಿಧಾನವಾಗಿ ಸಂಚರಿಸಬೇಕಾಗಿದ್ದು, ಇದರಿಂದ ಸಂಚಾರ ದಟ್ಟಣೆಯೂ ಮಿತಿಮೀರಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಕಚೇರಿ ಮತ್ತು ಶಾಲಾ-ಕಾಲೇಜು ಸಮಯದಲ್ಲಿ ಸಂಚಾರ ಸಿಕ್ಕಿನಲ್ಲಿ ಜನ ಪರದಾಡುವಂತಾಗಿದೆ.
ಮಳೆ ಬಂದರೆ ಕೆರೆಯಂತಾಗುವ ರಸ್ತೆಗಳು:
ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ಆರ್.ಆರ್.ನಗರ ಭಾಗದಲ್ಲಿ ಸಣ್ಣ ಮಳೆಯಾದರೂ ರಸ್ತೆ ತುಂಬೆಲ್ಲ ನೀರು ನಿಲ್ಲುವುದರಿಂದ ರಸ್ತೆಗಳು ಕೆರೆಯಂತಾಗುತ್ತಿವೆ. ರಸ್ತೆಗುಂಡಿಗಳ ಜೊತೆಗೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಇರುವ ವ್ಯವಸ್ಥೆ ಸರಿಯಾಗಿ ನಿರ್ವಹಣೆಯಾಗದಿರುವುದರಿಂದ ಮಳೆನೀರು ರಸ್ತೆಯ ಮೇಲೆಯೇ ನಿಲ್ಲುತ್ತಿದೆ. ದೊಡ್ಡ ಪ್ರಮಾಣದಲ್ಲಿ ನೀರು ನಿಂತಾಗ ರಸ್ತೆಯಲ್ಲಿರುವ ಹೊಂಡ-ಗುಂಡಿಗಳು ಕಾಣಿಸದೆ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ. ಮಳೆನೀರು ತುಂಬಿಕೊಂಡಿರುವ ಸಂದರ್ಭದಲ್ಲಿ ಗುಂಡಿಯ ಆಳ ತಿಳಿಯದೆ ಪ್ರಯಾಣಿಕರು ಬೀಳುವ ಘಟನೆಗಳು ಆಗಾಗ ನಡೆಯುತ್ತಿವೆ.
ಮಳೆನೀರು ನಿಂತಿರುವ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಗುಂಡಿಗಳು ಕಾಣಿಸದಿರುವುದರಿಂದ ಅಪಾಯ ಮತ್ತಷ್ಟು ಹೆಚ್ಚಾಗಿದೆ.
ಕೂಡಲೇ ದುರಸ್ತಿಗೆ ಆಗ್ರಹ
ರಸ್ತೆಯ ಡಾಂಬರು ಸಂಪೂರ್ಣವಾಗಿ ಕಿತ್ತುಹೋಗಿರುವ ಕಡೆಗಳಲ್ಲಿ ತಾತ್ಕಾಲಿಕವಾಗಿ ಮಣ್ಣು ಅಥವಾ ಜಲ್ಲಿ ಹಾಕುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಮಳೆ ಬಂದ ತಕ್ಷಣ ಮತ್ತೆ ರಸ್ತೆ ಹದಗೆಡುತ್ತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಪರಿಸ್ಥಿತಿಯನ್ನು ಪರಿಶೀಲಿಸಿ, ದುರಸ್ತಿ ಮಾಡಬೇಕೆಂದು ಸ್ಥಳೀಯರ ಆಗ್ರಹಿಸಿದ್ದಾರೆ.
ಮಳೆನೀರು ರಸ್ತೆಯಲ್ಲಿ ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬಸ್ ನಿಲುಗಡೆ ಹಾಗೂ ತಿರುವುಗಳಲ್ಲಿರುವ ಅಪಾಯಕಾರಿ ಗುಂಡಿಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆಗಳು ಗುಂಡಿಯಾಗಿರುವುದರಿಂದ ಮಳೆ ನೀರು ತುಂಬಿಕೊಂಡು ಹೊಂಡದಂತಾಗುತ್ತಿವೆ, ದ್ವಿಚಕ್ರ ವಾಹನ ಸವಾರರಂತು ಗುಂಡಿಯಲ್ಲಿ ಬಿದ್ದು ನಿತ್ಯ ಅಪಘಾತಕ್ಕೆ ಒಳಗಾಗುತ್ತಿದ್ದಾರೆ, ಸಂಬಂಧಪಟ್ಟ ಇಲಾಖೆಯವರು ಎಸಿ ರೂಮಿನಲ್ಲಿ ಕಣ್ಣು ಮುಚ್ಚಿ ಕುಳಿತಿರುವುದು ಅಘಾತಕಾರಿ ಸಂಗತಿ.ಶಿವಕುಮಾರ್, ವಿನಾಯಕ ಬಡಾವಣೆಯ ನಿವಾಸಿ
ಆರ್.ಆರ್.ನಗರದದ ಸುತ್ತಮುತ್ತಲಿನ ರಸ್ತೆಗಳೆಲ್ಲ ಗುಂಡಿಮಯವಾಗಿದ್ದು, ವಾಹನ ಚಲಾಯಿಸುವ ಮನೆಯ ಯಜಮಾನರು ಸುರಕ್ಷಿತವಾಗಿ ಮನೆಗೆ ವಾಪಸ್ ಆಗುವವರೆಗೂ ಆತಂಕದಲ್ಲೆ ದಿನದೂಡುವ ಪರಿಸ್ಥಿತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಕಾರ್ಯ ಕೈಗೊಂಡು ಸಮಸ್ಯೆಗೆ ಪರಿಹಾರ ಪರಿಹಾರ ಒದಗಿಸಬೇಕು.ಹೇಮಲತಾ, ಕೆಂಗುಂಟೆ ಬಡಾವಣೆ ನಿವಾಸಿ