ಅಂಚೆ ಸೇವಕಿಯಿಂದ ಗ್ರಾಹಕರಿಗೆ ಧೋಖಾ Postwoman
- ಜನರ ಖಾತೆಗಳಿಗೆ ಜಮಾ ಮಾಡದೆ ಹಣ ಸ್ವಂತಕ್ಕೆ ಬಳಕೆ
- ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಗೌರಿಬಿದನೂರು: ಗ್ರಾಹಕರು ಖಾತೆಗಳಲ್ಲಿ ಜಮಾ ಮಾಡಲು ನೀಡಿದ್ದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡು ದ್ರೋಹ ಎಸಗಲಾಗಿದೆ ಎಂದು ಆರೋಪಿಸಿ ತಾಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಯಿತು. Postwoman
ಅಂಚೆ ಕಚೇರಿಯಲ್ಲಿ 12 ವರ್ಷಗಳಿಂದ ಗ್ರಾಮೀಣ ಡಾಕ್ ಸೇವಕಿಯಾಗಿರುವ ರಮ್ಯ ಎಂಬಾಕೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಗ್ರಾಹಕರು ಠೇವಣಿ, ಎಸ್ಬಿ ಸೇರಿ ವಿವಿಧ ಖಾತೆಗಳಲ್ಲಿ ಜಮಾ ಮಾಡಲು ನೀಡಿದ್ದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಸುಮಾರು 200 ಮಂದಿ ಗ್ರಾಹಕರಿಗೆ 1 ಕೋಟಿ ರೂ. ಮೊತ್ತದಷ್ಟು ವಂಚನೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗಣಕೀಕೃತ ವ್ಯವಸ್ಥೆಯಲ್ಲಿ ಹಣ ಜಮಾ ಮಾಡಿದ್ದರೆ ಮೊಬೈಲ್ಗಳಿಗೆ ಸಂದೇಶ ಬರುತ್ತಿತ್ತು. ಆದರೆ ಹಣ ಜಮಾ ಮಾಡಿದಾಗ ಪುಸ್ತಕದಲ್ಲಿ ನಮೂದಿಸಿ ಅದನ್ನು ಇಲಾಖೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಆಕೆ ಹೆರಿಗೆಗೆಂದು ಸುದೀರ್ ರಜೆ ಮೇಲೆ ತೆರಳಿದಾಗ ಗ್ರಾಹಕರು ಖಾತೆಯಲ್ಲಿನ ಹಣ ಹಿಂಪಡೆಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಚೇರಿ ಉಸ್ತುವಾರಿಯನ್ನು ಪ್ರಶ್ನಿಸಿದರೆ ಸಮರ್ಪಕ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ರಮ್ಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಅನ್ಯಾಯಕ್ಕೊಳಗಾಗಿರುವ ಗ್ರಾಹಕರಿಗೆ ಹಣ ವಾಪಾಸ್ ಕೊಡಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಮುಖ್ಯ ಅಂಚೆ ಕಚೇರಿಗೆ ಮುತ್ತಿಗೆ: ತಾಲೂಕು ಕೇಂದ್ರದ ಮುಖ್ಯ ಅಂಚೆ ಕಚೇರಿಗೂ ಮುತ್ತಿಗೆ ಹಾಕಿ ಪ್ರತಿಭಟಿಸಿದ ನೂರಾರು ಗ್ರಾಹಕರು, ನಮ್ಮ ಹಣವನ್ನು ಹಿಂತಿರುಗಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಕಚೇರಿಯ ಅಧಿಕಾರಿ ಶಶಿ ಕುಮಾರ್ ಮನವಿ ಸ್ವೀಕರಿಸಿ, ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಆಲಿಸಿ, ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಗ್ರಾಹಕರಿಗೆ ನ್ಯಾಯ ಒದಗಿಸುವಂತೆ ಮೇಲಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಗ್ರಾಮೀಣ ಜನಕ್ಕೆ ಹೆಚ್ಚಾಗಿ ಬ್ಯಾಂಕ್ ಸೌಕರ್ಯ ಇರುವುದಿಲ್ಲ. ಆದ್ದರಿಂದ ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಭವಿಷ್ಯಕ್ಕೆ ಅನುಕೂಲವಾಗಲೆಂದು ಉಳಿತಾಯದ ಉದ್ದೇಶದಿಂದ ಅಂಚೆ ಕಚೇರಿ ಮೇಲೆ ವಿಶ್ವಾಸವಿರಿಸಿ ವಿವಿಧ ಖಾತೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಯಲ್ಲೇ ಈ ರೀತಿ ಆದರೆ ಜನ ಯಾರನ್ನು ನಂಬುವುದು? ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.