DK Shivakumar 
ರಾಜ್ಯ

ಚುನಾವಣೋತ್ತರ ಸಮೀಕ್ಷೆ ನಂಬಲ್ಲ, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ: DK Shivakumar

ಗುವಾಹಟಿ:"ಚುನಾವಣೋತ್ತರ ಸಮೀಕ್ಷೆಗಳು ನಮ್ಮ ಪರವಾಗಿರಲಿ, ಇಲ್ಲದಿರಲಿ ಅದರ ಮೇಲೆ ನನಗೆ ನಂಬಿಕೆ ಇಲ್ಲ. ನನ್ನ ತಂತ್ರಗಾರಿಕೆಯೇ ಬೇರೆ, ಈ ಬಾರಿ ಎಲ್ಲಾ ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ತಿಳಿಸಿದರು.
ಗುವಾಹಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಚುನಾವಣೋತ್ತರ ಸಮೀಕ್ಷೆ ವರದಿಗಳ ಬಗ್ಗೆ ಕೇಳಿದಾಗ, "ಈ ಸಮೀಕ್ಷೆಗಳಲ್ಲಿ ಬಳಸುವ ಮಾದರಿ ಪ್ರಮಾಣ ಬಹಳ ಸಣ್ಣದಾಗಿರುತ್ತವೆ. ಹೀಗಾಗಿ ನಮ್ಮ ಲೆಕ್ಕಾಚಾರ ಬೇರೆ ಇದೆ. ನಾನು ಯಾವುದೇ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ನಂಬುವುದಿಲ್ಲ. ನಾನು ಇಲ್ಲಿಗೆ ಬಂದಿರುವುದೇ ನಮ್ಮ ಶಾಸಕರನ್ನು ರಕ್ಷಿಸಿ, ಮಾರ್ಗದರ್ಶನ ನೀಡಿ, ಶಕ್ತಿ ತುಂಬಲು" ಎಂದು ತಿಳಿಸಿದರು.
ಅಸ್ಸಾಂ ಚುನಾವಣೆ ಬಗ್ಗೆ ಕೇಳಿದಾಗ, "ನಮ್ಮ ಕಾರ್ಯಕರ್ತರು ಬಹಳ ವಿಭಿನ್ನ. ಹೀಗಾಗಿ ಅಸ್ಸಾಂನಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ನಾಯಕರ ಮೇಲೆ ನಮಗೆ ನಂಬಿಕೆ ಇದೆ. ಅವರು ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಮತದಾರರ ಮೇಲೆ ವಿಶ್ವಾಸವಿದೆ. ಅವರಿಗೆ ಬದಲಾವಣೆ ಬೇಕಾಗಿದೆ. ಆ ಬದಲಾವಣೆ ಸಿಗಲಿದೆ ಎಂಬ ಆತ್ಮವಿಶ್ವಾಸವಿದೆ" ಎಂದು ತಿಳಿಸಿದರು.
ತಮಿಳುನಾಡು ಚುನಾವಣೆ ಬಗ್ಗೆ ಕೇಳಿದಾಗ, "ದೇಶದಾದ್ಯಂತ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದೆ" ಎಂದರು.
ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೋಟ ಅಧಿಕಾರಕ್ಕೆ ಬರುವುದೇ ಎಂದು ಕೇಳಿದಾಗ, "ಪ್ರತಿ ರಾಜ್ಯದಲ್ಲೂ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ" ಎಂದರು.