ತೇರದಾಳದ ಡಾ. ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಶಾಲೆಯಲ್ಲಿ ನಡೆದ ಸಿಬಿಎಸ್‌ಇ ಕ್ಲಸ್ಟರ್-8 ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯ 19 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದ ಬೆಂಗಳೂರಿನ ಪ್ರೆಸಿಡೆಂಟ್ ಶಾಲೆ ತಂಡ.
- ಸಿಬಿಎಸ್‌ಇ ಕ್ಲಸ್ಟರ್-8 ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಸಂಪನ್ನ
- ರಾಷ್ಟ್ರಮಟ್ಟಕ್ಕೆ ಆಯ್ಕೆ
ತೇರದಾಳ: ಪಟ್ಟಣದ ಡಾ. ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ಸಿಬಿಎಸ್‌ಇ ಕ್ಲಸ್ಟರ್-8 ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಭಾನುವಾರ ಯಶಸ್ವಿಯಾಗಿ ಸಮಾಪ್ತಿಯಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಾಲಾ ತಂಡಗಳು ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ಕೌಶಲಪೂರ್ಣ ಆಟದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು.
14 ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್‌ನಲ್ಲಿ ಬಳ್ಳಾರಿಯ ರಾಷ್ಟ್ರೋತ್ಥಾನ ಶಾಲೆ ತಂಡವು ಬಿಡದಿಯ ತ್ಯಾಗರಾಜ ಶಾಲೆಯನ್ನು 2-0 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳದ ಸೆಂಟ್ ಮೇರಿ ಶಾಲೆ ತಂಡವು ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ವಿರುದ್ಧ 2-0 ಅಂತರದ ಗೆಲುವು ಸಾಧಿಸಿತು.
19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ತಂಡವು ಆರ್ಮಿ ಪಬ್ಲಿಕ್ ಸ್ಕೂಲ್‌ನ್ನು 2-0 ಅಂತರದಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಪ್ರೆಸಿಡೆಂಟ್ ಶಾಲೆ ತಂಡವು ದೆಹಲಿ ಪಬ್ಲಿಕ್ ಸ್ಕೂಲ್ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಪ್ರಾರ್ಥನಾ ಸೆಂಟ್ರಲ್ ಸ್ಕೂಲ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಪಂದ್ಯಾವಳಿಗೆ ಅರ್ಹತೆ ಗಳಿಸಿತು.
ಪ್ರಥಮ ಸ್ಥಾನ ಪಡೆದ ಎಲ್ಲ ತಂಡಗಳು ರಾಷ್ಟ್ರಮಟ್ಟದ ಸಿಬಿಎಸ್‌ಇ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿವೆ. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿ, ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಉತ್ತರ ಕರ್ನಾಟಕದ ಆತಿಥ್ಯಕ್ಕೆ ಮೆಚ್ಚುಗೆ: ಸಾಮಾನ್ಯವಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ನಡೆಯುವ ಇಂತಹ ಕ್ರೀಡಾಕೂಟವನ್ನು ತೇರದಾಳದಲ್ಲಿ ಯಶಸ್ವಿಯಾಗಿ ಆಯೋಜಿಸಿರುವುದು ಗಮನಾರ್ಹವಾಗಿದೆ.
ಕ್ರೀಡಾಪಟುಗಳು, ತರಬೇತುದಾರರು ಹಾಗೂ ನಿರ್ಣಾಯಕರು ಇಲ್ಲಿನ ವಸತಿ, ಊಟ, ಸಾರಿಗೆ ಮತ್ತು ಶಿಸ್ತುಬದ್ಧ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಡಿಎಂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಮಹಾವೀರ ದಾನಿಗೊಂಡ ಅವರು ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸಿದ ಆಡಳಿತ ಮಂಡಳಿ, ಶಿಕ್ಷಕರು, ಕ್ರೀಡಾ ತರಬೇತುದಾರರು, ಪಾಲಕರು ಹಾಗೂ ಸ್ವಯಂಸೇವಕರನ್ನು ಅಭಿನಂದಿಸಿದರು.
ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ನಾಯಕತ್ವ, ಶಿಸ್ತು ಮತ್ತು ತಂಡದ ಮನೋಭಾವ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.